ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಆದೇಶದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಹಾಸಿಗೆ ಮೀಸಲಿರಿಸಬೇಕು. ಈ ಸಂಬಂಧ ನಗರದ ಆಸ್ಪತ್ರೆಗಳ ಮೇಲೆ ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ ಪ್ರಮುಖ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದರು. ಈ ವೇಳೆ ವಲಯ ಆಯುಕ್ತ ಡಿ.ರಂದೀಪ್, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣ ಕ್ರಮೇಣ ಏರಿಕೆಯಾಗುತ್ತಿವೆ. ಸರ್ಕಾರದ ಆದೇಶದಂತೆ ಸೋಂಕಿತರ ಚಿಕಿತ್ಸೆಗಾಗಿ ಶೇ.50ರಷ್ಟು ಹಾಸಿಗೆಗಳನ್ನು ಮೀಸಲಿಡಲಾಗಿದೆಯೇ ಇಲ್ಲವೇ ಎಂಬುದನ್ನು ತಿಳಿಯಲು ಇಂದು ವಿಕ್ರಂ, ಫೋರ್ಟಿಸ್, ಆಸ್ಟರ್ ಸಿಎಂಐ, ಕೊಲಂಬಿಯಾ ಏಷಿಯಾ ಹಾಗೂ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ವೇಳೆ ಯಾವ ಆಸ್ಪತ್ರೆಯಲ್ಲೂ ಶೇ.50ರಷ್ಟು ಹಾಸಿಗೆಗಳನ್ನು ಮೀಸಲಿಡದ ಪರಿಣಾಮ 5 ಆಸ್ಪತ್ರೆಗಳಿಗೆ ಕಾರಣ ಕೇಳಿ ನೋಟಿಸ್ ನೀಡಿ, 24 ಗಂಟೆಯೊಳಗಾಗಿ ಸಮಜಾಯಿಷಿ ನೀಡುವಂತೆ ಸೂಚಿಸಲಾಗಿರುತ್ತದೆ. ಹಾಸಿಗೆ ನೀಡದಿದ್ದರೆ ಕೆಪಿಎಂಇ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ.
ವಿಕ್ರಂ ಆಸ್ಪತ್ರೆಯಲ್ಲಿ 39 ಹಾಸಿಗೆ ಹಾಗೂ ಫೋರ್ಟಿಸ್ ಆಸ್ಪತ್ರೆಯಲ್ಲಿ 30 ಹಾಸಿಗೆ ಮೀಸಲಿಡಬೇಕಿರುತ್ತದೆ. ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಮೀಸಲಿಟ್ಟಿರುವ ಸಂಖ್ಯೆಯ ಸೂಚನಾ ಫಲಕವನ್ನು ಪ್ರವೇಶದ್ವಾರದ ಮುಂದೆ ಅಳವಡಿಸಿರಬೇಕಾಗಿರುತ್ತದೆ. ಸರಿಯಾದ ಮಾಹಿತಿ ನೀಡದ ಹಾಗೂ ಸರ್ಕಾರದ ಆದೇಶ ಪಾಲಿಸದ ಕಾರಣ ಎರಡು ಆಸ್ಪತ್ರೆಗೆ ನೋಟಿಸ್ ಜಾರಿ ಮಾಡಲಾಗಿರುತ್ತದೆ.
ಆಸ್ಟರ್ ಸಿಎಂಐ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಮುಖ್ಯ ಆಯುಕ್ತರು, ಸದರಿ ಆಸ್ಪತ್ರೆಯಲ್ಲಿ ಸರ್ಕಾರದ ಆದೇಶದಂತೆ ಇನ್ನೂ ಶೇ.50ರಷ್ಟು ಹಾಸಿಗೆಗಳನ್ನು ಮೀಸಲಿಡದ ಕಾರಣ, ಸ್ಥಳದಲ್ಲೇ ಕಾರಣ ಕೇಳಿ ನೋಟೀಸ್ ನೀಡಿದ್ದಾರೆ. 24 ಗಂಟೆಯೊಳಗಾಗಿ ಉತ್ತರ ನೀಡಲು ತಿಳಿಸಲಾಗಿರುತ್ತದೆ. ಉತ್ತರ ನೀಡದಿದ್ದಲ್ಲಿ ಒಪಿಡಿ ಮುಚ್ಚುವುದಾಗಿ ಸೂಚಿಸಲಾಗಿರುತ್ತದೆ.
ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ಸರ್ಕಾರದ ಆದೇಶದ ಪ್ರಕಾರ 112 ಹಾಸಿಗೆಗಳನ್ನು ಮೀಸಲಿಡಬೇಕಿರುತ್ತದೆ. ಆದರೆ, ಶೇ.20ರಂತೆ ಸಾಮಾನ್ಯ, ಐಸಿಯು, ವೆಂಟಿಲೇಟರ್ ಸೇರಿ 45 ಹಾಸಿಗೆಗಳನ್ನು ಮಾತ್ರ ಮೀಸಲಿಟ್ಟಿರುತ್ತಾರೆ.
ಕೋವಿಡ್ ಸೋಂಕಿತರಿಗಾಗಿ ಶೇ.50ರಷ್ಟು ಹಾಸಿಗೆ ಮೀಸಲಿಡಬೇಕೆಂದು ಈಗಾಗಲೇ ಒಮ್ಮೆ ನೋಟಿಸ್ ಜಾರಿ ಮಾಡಲಾಗಿತ್ತು. ಆದರೂ ಇನ್ನೂ ಮೀಸಲಿಡದ ಕಾರಣ ಇಂದು ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಕೂಡಲೆ ಶೇ.50ರಷ್ಟು ಹಾಸಿಗೆ ಮೀಸಲಿಡಲು ಆಸ್ಪತ್ರೆಗೆ ಸೂಚಿಸಲಾಗಿರುತ್ತದೆ.
ತದ ನಂತರ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದಾಗ, ಸರ್ಕಾರದ ಆದೇಶದಂತೆ 30 ಹಾಸಿಗೆ ಮೀಸಲಿಡಬೇಕಿರುತ್ತದೆ. ಆದರೆ, ಇನ್ನೂ 15 ಹಾಸಿಗೆ ಮಾತ್ರ ಮೀಸಲಿಡಲಾಗಿರುತ್ತದೆ. ಆದ್ದರಿಂದ ಇನ್ನು 24 ಗಂಟೆಯಲ್ಲಿ ಮೀಸಲಿರಿಸಬೇಕಿರುವ ಹಾಸಿಗೆಯನ್ನು ಮೀಸಲಿಡಬೇಕೆಂದು ಕಾರಣ ಕೇಳುವ ನೋಟಿಸ್ ನೀಡಲಾಗಿರುತ್ತದೆ.
ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಭೇಟಿ ನೀಡಲಾಗಿದೆ. 124 ಹಾಸಿಗೆಗಳ ಪೈಕಿ 63 ಹಾಸಿಗೆಗಳನ್ನು ಮಾತ್ರ ಮೀಸಲಿಡಲಾಗಿತ್ತು. ಈ ಪೈಕಿ ಬ್ಯಾಪ್ಟಿಸ್ಟ್ ಆಸ್ಪತ್ರೆಗೂ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. 24 ಗಂಟೆಯೊಳಗಾಗಿ ಉತ್ತರ ನೀಡುವಂತೆ ತಿಳಿಸಿ ಹಾಸಿಗೆ ಮೀಸಲಿಡದಿದ್ದರೆ ಒಪಿಡಿ ಬಂದ್ ಮಾಡುವುದಾಗಿ ಎಚ್ಚರಿಸಲಾಗಿದೆ.
ತಪಾಸಣೆ ಮುಗಿಸಿದ ನಂತರ ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ ಮಾತನಾಡಿ, ಆಸ್ಪತ್ರೆಗಳು ವ್ಯವಸ್ಥೆಯನ್ನು ಜರೂರಾಗಿ 24 ತಾಸಿನೊಳಗೆ ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.