ಬೆಂಗಳೂರು: ನಾಲ್ಕು ವರ್ಷದ ಮಗುವನ್ನು ಎರಡು ದಿನಗಳ ಹಿಂದೆ ತಡರಾತ್ರಿ ಕಿಡ್ನಾಪ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯ ಕಾಲಿಗೆ ಶ್ರೀರಾಂಪುರ ಇನ್ಸ್ಪೆಕ್ಟರ್ ಸುನಿಲ್ ನಾಯ್ಕ ಗುಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ. ಇನ್ನು ಮಗುವಿನ ಸ್ಥಿತಿ ಗಂಭೀರವಾಗಿದೆ.
ಚೆನ್ನೈ ಮೂಲದ ಆರೋಪಿ ದಿನೇಶ್ ಎಂಬಾತನ ವಿರುದ್ಧ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡ ಉತ್ತರ ವಿಭಾಗದ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ತನಿಖೆ ನಡೆಯುತ್ತಿದ್ದಂತೆ ಬೆಳಗಿನ ಜಾವ ಶ್ರೀರಾಂಪುರ ಇನ್ಸ್ಪೆಕ್ಟರ್ ಸುನಿಲ್ ನಾಯ್ಕ ಅವರಿಗೆ ದಿನೇಶ್ ಇರುವ ಸ್ಥಳದ ಮಾಹಿತಿ ತಿಳಿದಿದೆ. ಈ ಹಿನ್ನೆಲೆಯಲ್ಲಿಅರೆಸ್ಟ್ ಮಾಡಲು ಶ್ರೀರಾಂಪುರ ಪೊಲೀಸ್ ಠಾಣೆ ಬಳಿಯ ಆರ್ಆರ್ಕೆ ಕಲ್ಯಾಣ ಮಂಟಪ ಬಳಿ ತೆರಳಿದ್ದಾರೆ. ಈ ವೇಳೆ ಶರಣಾಗುವಂತೆ ಸೂಚಿದ್ದು, ಆದರೆ ಆತ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಹೀಗಾಗಿ ಆತ್ಮರಕ್ಷಣೆಗೆಂದು ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಸದ್ಯ ಆತನಿಗೆ ಕೆಸಿ ಜನರಲ್ ಅಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಚೆನ್ನೈ ಮೂಲದ ದಿನೇಶ್ ಕೆಲಸ ಅರಸಿ ಶ್ರೀರಾಂಪುರಕ್ಕೆ ಬಂದಿದ್ದ. ಈತನ ವಿಕೃತ ಮನಸ್ಸಿಗೆ ಪುಟ್ಟ ಕಂದಮ್ಮ ಸಿಕ್ಕಿಬಿದ್ದಿದ್ದು, ಸದ್ಯ ಮಗುವಿನ ಪರಿಸ್ಥಿತಿ ಚಿಂತಾಜನಕವಾಗಿದೆ. ದಂಪತಿಯು ರಾತ್ರಿ ಮಳೆ ಬಂದ ಕಾರಣ ರೈಲ್ವೆ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ಮಲಗಿದ್ದರು. ಈ ವೇಳೆ ಆರೋಪಿಯು ಮಗುವನ್ನು ಕಿಡ್ನಾಪ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.