ಬೆಂಗಳೂರು: ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅರುಣ್ ಕುಮಾರ್ ಗುತ್ತಲ್(ಪೂಜಾರ) ಅವರನ್ನು ಕಣಕ್ಕಿಳಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದಾರೆ. ಆ ಮೂಲಕ ರಾಣೆಬೆನ್ನೂರು ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಎನ್ನುವ ಗೊಂದಲಕ್ಕೆ ಅಧಿಕೃತವಾಗಿ ತೆರೆ ಎಳೆದಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸ ಧವಳಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ನಿನ್ನೆ ಶಂಕರ್ ಹಾಗೂ ಅವರ ಪತ್ನಿ ಜೊತೆ ಮಾತನಾಡಿದ್ದೇನೆ ಯಾರೇ ನಿಂತರು ಅವರಿಗೆ ಬೆಂಬಲ ಕೊಡುತ್ತೇನೆ ಎಂದು ಶಂಕರ್ ಹಾಗೂ ಅವರ ಪತ್ನಿ ಹೇಳಿದ್ದಾರೆ. ಎಂಎಲ್ಸಿ ಮಾಡಿ ಮಂತ್ರಿ ಮಾಡ್ತೇನೆ ಎಂದು ಶಂಕರ್ಗೆ ಮಾತು ಕೊಟ್ಟಿದ್ದೇನೆ. ಅರುಣ್ ಕುಮಾರ್ ಗುತ್ತಲ್ ಒಳ್ಳೆಯ ಅಭ್ಯರ್ಥಿ ಹೀಗಾಗಿ ಅವರ ಪರ ಕೆಲಸ ಮಾಡುವಂತೆ ಹೇಳಿದ್ದೇನೆ ಅದಕ್ಕೆ ಅವರು ಕೂಡ ಒಪ್ಪಿ ಹೋಗಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದರು.
ನನ್ನ ಜೀವನದಲ್ಲಿ ನಾನು ಯಾವತ್ತು ಕುರ್ಚಿಗೆ ಅಂಟಿಕೊಂಡವನಲ್ಲ, ಯಾರಿಗೆ ಆಗಲಿ, ನಾನು ಏನು ಭರವಸೆ ಕೊಡುತ್ತೇನೋ ಆ ಭರವಸೆಯನ್ನು ನಾನು ಈಡೇರಿಸುತ್ತೇನೆ. ಅದರಂತೆ ಆರ್ ಶಂಕರ್ಗೆ ಕೊಟ್ಟಿರೋ ಬೇಡಿಕೆ ಕೂಡ ಈಡೇರಿಸುತ್ತೇನೆ. ಅವರನ್ನು ಎಂಎಲ್ಸಿ ಮಾಡಿ ಮಂತ್ರಿ ಮಾಡುತ್ತೇನೆ ಈ ಮೂಲಕ ರಾಣಿಬೆನ್ನೂರು ಸಮಸ್ಯೆ ಬಗೆಹರಿದಿದೆ ಎಂದರು.
ರೋಷನ್ ಬೇಗ್ ಜೊತೆಯೂ ಎರಡು ಮೂರು ಬಾರಿ ಮಾತನಾಡಿದ್ದೇನೆ. ಇವತ್ತಿನ ಪರಿಸ್ಥಿತಿಯಲ್ಲಿ ನಿಮಗೆ ಟಿಕೆಟ್ ಕೊಡಲು ಆಗಲ್ಲ, ತಮಿಳು ಜನಾಂಗದವರಾದ ಶರವಣಗೆ ಟಿಕೆಟ್ ಕೊಡುತ್ತೇವೆ ಅವರ ಪರ ಕೆಲಸ ಮಾಡಿ ಎಂದು ಹೇಳಿದ್ದೇನೆ ಆದರೆ ಮುಂದಿನ ತೀರ್ಮಾನ ಅವರಿಗೆ ಬಿಟ್ಟಿದ್ದು ಎಂದರು.
15ಕ್ಕೆ 15 ಸ್ಥಾನಗಳನ್ನು ಗೆಲ್ಲುತ್ತೇವೆ :
ನೂರಕ್ಕೆ ನೂರರಷ್ಟು ನಾವೇ ಗೆಲ್ಲಲಿದ್ದೇವೆ ಈಗಾಗಲೇ ಸಚಿವರನ್ನು ಕ್ಷೇತ್ರಕ್ಕೂ ನಿಯೋಜನೆ ಮಾಡಿದ್ದೇವೆ. ಡಿಸೆಂಬರ್ 9 ರಂದು ಫಲಿತಾಂಶ ಬಂದ ನಂತರ ರಾಜ್ಯ ರಾಜಕೀಯಕ್ಕೆ ಸ್ವಲ್ಪ ತಿರುವು ಸಿಗಲಿದೆ ನಾವು ಯಾರ ಜೊತೆಯೂ ಅವಲಂಬಿತರಾಗದೆ ಸ್ವತಂತ್ರವಾಗಿ ಸರ್ಕಾರ ಮುನ್ನಡೆಸಿಕೊಂಡು ಹೋಗುತ್ತೇವೆ ಎಂದರು.
ಶರತ್ ಬಚ್ಚೇಗೌಡ ಜೊತೆ ಮಾತನಾಡುವ ವಿಚಾರ ಸಂಬಂಧ ರಾಜ್ಯಾಧ್ಯಕ್ಷರ ಜೊತೆ ಚರ್ಚೆ ಮಾಡಿದ್ದೇನೆ. ಈ ಬಗ್ಗೆ ಅವರು ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಕೈಗೊಳ್ಳಲಿದ್ದಾರೆ. ನಿನ್ನೆ ಅವರು ನಾಮಪತ್ರ ಸಲ್ಲಿಕೆ ಮಾಡುವ ವಿಚಾರ ನನಗೆ ಗೊತ್ತಿಲ್ಲ ಎಂದರು.
ಅರುಣ್ ಕುಮಾರ್ ಗುತ್ತಲ್ ಸಂತಸ :
ಇತ್ತ ರಾಣೆಬೆನ್ನೂರು ಕ್ಷೇತ್ರದ ಉಪ ಚುನಾವಣೆಗೆ ಟಿಕೆಟ್ ಸಿಕ್ಕಿರುವುದಕ್ಕೆ ಅರುಣ್ ಕುಮಾರ್ ಗುತ್ತಲ್ ಸಂತಸ ವ್ಯಕ್ತಪಡಿಸಿದ್ದಾರೆ. ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸ ಧವಳಗಿರಿಗೆ ಆಗಮಿಸಿದ ಅರುಣ್ ಕುಮಾರ್, ಸಿಎಂ ಬಿಎಸ್ವೈ ಅವರನ್ನು ಭೇಟಿಯಾದರು. ಅವರಿಗೆ ಸಿಎಂ, ತಮ್ಮನ್ನು ಕ್ಷೇತ್ರದ ಅಭ್ಯರ್ಥಿಯಾಗಿ ಪರಿಗಣಿಸಿದ್ದು, ಕಚೇರಿಗೆ ತೆರಳಿ ಬಿ ಫಾರಂ ಪಡೆದುಕೊಳ್ಳುವಂತೆ ಸೂಚನೆ ನೀಡಿದರು.
ಸಿಎಂ ಭೇಟಿ ನಂತರ ಮಾತನಾಡಿದ ಅರುಣ್ ಕುಮಾರ್, ಸಿಎಂ ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಎಲ್ಲ ನಾಯಕರು ನನ್ನನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ಅವರಿಗೆಲ್ಲಾ ಧನ್ಯವಾದ ಹೇಳುತ್ತೇನೆ, ಈಗ ಬಿಜೆಪಿ ಕಚೇರಿಗೆ ತೆರಳುತ್ತಿದ್ದು ಬಿ ಫಾರಂ ಪಡೆದುಕೊಳ್ಳಲಿದ್ದೇನೆ ಎಂದರು.