ಬೆಂಗಳೂರು: ಇಂದು ನಗರಕ್ಕೆ ಆಗಮಿಸುತ್ತಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ ರಾಜ್ಯ ಕಾಂಗ್ರೆಸ್ ನಾಯಕರ ಜೊತೆ ಚರ್ಚಿಸಲಿದ್ದಾರೆ.
ಬಿಬಿಎಂಪಿ ಚುನಾವಣೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ಇಂದು ಸುರ್ಜೆವಾಲಾ ಸಭೆ ನಡೆಸಲಿದ್ದಾರೆ. ಇಂದು ಮಧ್ಯಾಹ್ನ 12.45ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಅವರು ನಗರದ ಕುಮಾರ ಕೃಪ ಅತಿಥಿಗೃಹಕ್ಕೆ ಆಗಮಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಅವರು ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಶಾಸಕರು ಹಾಗೂ ಮಾಜಿ ಮೇಯರ್ಗಳ ಜೊತೆ ಸಭೆ ನಡೆಸಲಿದ್ದಾರೆ.
ಬಿಬಿಎಂಪಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್ ನಾಯಕರ ಜೊತೆ ಅವರು ಇಂದು ಮಹತ್ವದ ಸಭೆ ನಡೆಸಿ ಚರ್ಚಿಸಲಿದ್ದು, ಅತಿ ಹೆಚ್ಚು ಸ್ಥಾನ ಗೆಲ್ಲುವ ಸಂಬಂಧ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚಿಸಲಿದ್ದಾರೆ.
ಪುತ್ರಿಯ ವಿವಾಹ ಆರತಕ್ಷತೆ ಸಮಾರಂಭದ ಸಿದ್ಧತೆಯಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇಂದಿನ ಸಭೆಯಲ್ಲಿ ಭಾಗವಹಿಸುತ್ತಿಲ್ಲ. ಇನ್ನು ದೆಹಲಿಯಲ್ಲಿ ಇರುವ ಹಿನ್ನೆಲೆ ಸಿದ್ದರಾಮಯ್ಯ ಕೂಡ ಸಭೆಯಲ್ಲಿ ಅನುಪಸ್ಥಿತರಿರಲಿದ್ದಾರೆ. ರಾಜ್ಯ ಕಾಂಗ್ರೆಸ್ ನ ಪ್ರಮುಖ ನಾಯಕರು ಪಾಲ್ಗೊಳ್ಳದಿದ್ದರೂ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಶಾಸಕರು ಹಾಗೂ ಮುಖಂಡರು ಪಾಲ್ಗೊಂಡು ಸಭೆ ನಡೆಸಲಿದ್ದಾರೆ. ಇಂದು ಬಿಬಿಎಂಪಿ ಚುನಾವಣೆ ಸಂಬಂಧ ಸಭೆ ನಡೆಸುವ ಸುರ್ಜೆವಾಲಾ ಇನ್ನೂ ಎರಡು ದಿನ ಬೆಂಗಳೂರಿನಲ್ಲಿಯೇ ಇರಲಿದ್ದು ಇತರ ನಾಯಕರ ಜೊತೆ ಬೇರೆ ವಿಚಾರಗಳ ಸಂಬಂಧ ನಾಳೆ ಚರ್ಚೆ ನಡೆಸಲಿದ್ದಾರೆ ಎಂಬ ಮಾಹಿತಿ ಇದೆ.
ಇಂದು ಸಂಜೆ 3 ಗಂಟೆಗೆ ಬಿಬಿಎಂಪಿ ವ್ಯಾಪ್ತಿಯ ಸಭೆ ನಡೆಸುವ ಸುರ್ಜೆವಾಲಾ ಸಂಜೆ ಬೆಂಗಳೂರು ಹೊರವಲಯದ ರೆಸಾರ್ಟ್ನಲ್ಲಿ ನಡೆಯುವ ಡಿಕೆಶಿ ಪುತ್ರಿ ಆರತಕ್ಷತೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಸುರ್ಜೆವಾಲಾ ಭೇಟಿ ಹಿನ್ನೆಲೆ ಬೆಂಗಳೂರಿನ ಕುಮಾರ ಕೃಪ ಅತಿಥಿಗೃಹಕ್ಕೆ ವಿಶೇಷ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿದೆ.