ಬೆಂಗಳೂರು : ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಸಿಎಂ ವಿಚಾರವಾಗಿ ಇತ್ತೀಚಿನ ದಿನಗಳಲ್ಲಿ ನಿರಂತರ ಹೇಳಿಕೆ ನೀಡುತ್ತಿರುವ ಮಾಜಿ ಸಚಿವ ಜಮೀರ್ ಅಹಮದ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಎಚ್ಚರಿಕೆ ನೀಡಿದ್ದಾರೆ.
ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂಬ ಹೇಳಿಕೆ ಜೊತೆಗೆ ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧವೇ ಉಡಾಫೆಯ ಮಾತುಗಳನ್ನಾಡುತ್ತಿರುವ ಜಮೀರ್ ಅಹ್ಮದ್ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೇ ಪಕ್ಷದ ಕಾರ್ಯಕರ್ತರು ಸಹ ಇದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಯನ್ನು ರಾಜ್ಯದ ಎಲ್ಲ ಕಾಂಗ್ರೆಸ್ ನಾಯಕರು ಒಗ್ಗಟ್ಟಿನಿಂದ ಎದುರಿಸಬೇಕು ಎಂಬ ಸಂದೇಶವನ್ನು ಹಿಂದಿನಿಂದಲೂ ನೀಡುತ್ತಲೇ ಬಂದಿರುವ ಪಕ್ಷದ ಹೈಕಮಾಂಡ್ ಇದೀಗ ಜಮೀರ್ ಗೆ ಎಚ್ಚರಿಕೆ ನೀಡಿದೆ.
ರಾಜ್ಯದಲ್ಲಿ ಯಾರಿಗೆ ನಾಯಕತ್ವ ನೀಡಬೇಕು ಹಾಗೂ ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಅರಿವು ಪಕ್ಷದ ಹೈಕಮಾಂಡ್ಗೆ ಇದ್ದು, ಈ ಬಗ್ಗೆ ರಾಜ್ಯ ನಾಯಕರು ಯಾವುದೇ ಹೇಳಿಕೆ ನೀಡಬಾರದು ಎಂದು ಈ ಹಿಂದೆಯೇ ಪಕ್ಷದ ಹೈಕಮಾಂಡ್ ತಾಕೀತು ಮಾಡಿತ್ತು. ಆದರೆ, ಸಿದ್ದರಾಮಯ್ಯ ದಿನದ ಅಮೃತ ಮಹೋತ್ಸವದ ಹೆಸರಿನಲ್ಲಿ ಆಚರಿಸಲು ಅವರ ಅಭಿಮಾನಿಗಳು ಮತ್ತು ಕಾಂಗ್ರೆಸ್ ನಾಯಕರು ಸಿದ್ಧತೆ ನಡೆಸಿದ್ದು, ದಾವಣಗೆರೆಯಲ್ಲಿ ಆಗಸ್ಟ್ ಮೂರರಂದು ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದ ಸಿದ್ಧತೆಗೋಸ್ಕರ ಹುಬ್ಬಳ್ಳಿ, ದಾವಣಗೆರೆ ಹಾಗೂ ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪೂರ್ವಭಾವಿ ಸಭೆ ನಡೆಸುತ್ತಿರುವ ಮಾಜಿ ಸಚಿವ ಜಮೀರ್ ಅಹಮದ್ ಸಾಕಷ್ಟು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಿದ್ದರಾಮಯ್ಯ ಪರವಾಗಿ ಹಾಗೂ ಪರೋಕ್ಷವಾಗಿ ಡಿಕೆ ಶಿವಕುಮಾರ್ ವಿರುದ್ಧವಾಗಿ ಹೇಳಿಕೆಯನ್ನು ನೀಡುತ್ತಿದ್ದಾರೆ. ಇದನ್ನು ಗಮನಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಪತ್ರ ಬರೆದು ಜಮೀರ್ ಗೆ ಎಚ್ಚರಿಕೆ ನೀಡಿದ್ದಾರೆ.
ಜಮೀರ್ ಬಹಿರಂಗ ಹೇಳಿಕೆಗೆ ಎಐಸಿಸಿಯಿಂದ ಎಚ್ಚರಿಕೆ ನೀಡಲಾಗಿದ್ದು, ನಿಮ್ಮಂಥವರು ಪಕ್ಷದ ಲಕ್ಷ್ಮಣ ರೇಖೆ ದಾಟಬಾರದು. ನೀವು ಪಕ್ಷದ ರೇಖೆಯೊಳಗೆ ಇರುವುದನ್ನು ನಿರೀಕ್ಷಿಸಿದ್ದೇವೆ. ಅನಾವಶ್ಯಕ ಹೇಳಿಕೆ ಪ್ರತಿಕೂಲ ವಾತಾವರಣ ಸೃಷ್ಟಿಸಿದೆ. ಭಾರತೀಯ ಕಾಂಗ್ರೆಸ್ ಪಕ್ಷ ನಿಮ್ಮಿಂದ ಈ ಹೇಳಿಕೆ ನಿರೀಕ್ಷಿಸಲ್ಲ. ಅನಾವಶ್ಯಕ ಹೇಳಿಕೆಯಿಂದ ತಪ್ಪು ಸಂದೇಶ ರವಾನೆಯಾಗುತ್ತದೆ. ಎಲ್ಲ ಜನಾಂಗ, ಸಮೂಹ ಒಳಗೊಳ್ಳುವುದು ‘ಕೈ’ ಸಿದ್ಧಾಂತ ಎಂದು ಸುರ್ಜೇವಾಲ ತಿಳಿಸಿದ್ದಾರೆ.
ಓದಿ : ಶಾಸಕ ಜಮೀರ್ ಅಹಮದ್ ವಿರುದ್ಧ ಒಕ್ಕಲಿಗ ಸಮುದಾಯದ ಪ್ರತಿಭಟನೆ: ವಿಡಿಯೋ