ಬೆಂಗಳೂರು: ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಹಾಗೂ ಉನ್ನತ ಶಿಕ್ಷಣ ಸಚಿವ ಡಾ ಅಶ್ವತ್ಥ್ ನಾರಾಯಣ್ ಭೇಟಿಯನ್ನು ಭಿನ್ನವಾಗಿ ವಿಮರ್ಶಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ಗೆ ಮಾಜಿ ಸಂಸದೆ ರಮ್ಯಾ ಟ್ವೀಟ್ ಮೂಲಕ ಟಾಂಗ್ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಅಶ್ವತ್ಥ್ ನಾರಾಯಣ್ ಅವರು ಎಂ.ಬಿ. ಪಾಟೀಲ್ರನ್ನು ಭೇಟಿ ಮಾಡಿದ್ದರು. ಈ ವಿಚಾರವಾಗಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಕೆಪಿಸಿಸಿ ಅಧ್ಯಕ್ಷರು, ಅಶ್ವತ್ಥ್ ನಾರಾಯಣ್ ತಮ್ಮ ರಕ್ಷಣೆಗೆ ಎಂ.ಬಿ. ಪಾಟೀಲರನ್ನು ಭೇಟಿ ಮಾಡಿದ್ದಾರೆಂಬ ಹೇಳಿಕೆ ನೀಡಿದ್ದರು.
ಈ ವಿಚಾರವನ್ನು ಮುಂದಿಟ್ಟುಕೊಂಡು ಟ್ವೀಟ್ ಮಾಡಿರುವ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಅವರು, ಎಂ.ಬಿ. ಪಾಟೀಲ್ ಹಾಗೂ ಅಶ್ವತ್ಥ್ ನಾರಾಯಣ್ ಭೇಟಿಯನ್ನು ಸಮರ್ಥಿಸಿಕೊಂಡಿದ್ದಾರೆ. ಪಕ್ಷಾತೀತವಾಗಿ ನಾಯಕರು ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಸಹಜ. ಕೆಲ ಬೇರೆ ಬೇರೆ ಪಕ್ಷದ ನಾಯಕರ ಕುಟುಂಬ ಸದಸ್ಯರು ಮದುವೆ ಆಗುವ ಮೂಲಕ ಸಂಬಂಧಿಕರಾಗಿದ್ದಾರೆ. ಆದರೆ ಡಿ.ಕೆ. ಶಿವಕುಮಾರ್ ಅವರು ಎಂ.ಬಿ. ಪಾಟೀಲ್ ಬಗ್ಗೆ ನೀಡಿರುವ ಹೇಳಿಕೆ ನನಗೆ ಅಚ್ಚರಿ ಮೂಡಿಸಿದೆ ಎಂದಿದ್ದಾರೆ.
ಎಂ.ಬಿ.ಪಾಟೀಲ್ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಎಂದು ಹೇಳಿರುವ ರಮ್ಯಾ ಅಪರೂಪಕ್ಕೆ ರಾಜಕೀಯ ವಿಚಾರವಾಗಿ ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ರಾಜಕೀಯ ಚಟುವಟಿಕೆಯಲ್ಲೂ ಕಾಣಿಸಿಕೊಳ್ಳದ ಅವರು ಚಿತ್ರರಂಗದಲ್ಲಿಯೂ ಅಷ್ಟೊಂದು ಸಕ್ರಿಯವಾಗಿ ಗೋಚರಿಸದೆ ತೆರೆಮರೆಗೆ ಸರಿದಿದ್ದರು. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಅವರು ಚಿತ್ರರಂಗ ಹಾಗೂ ರಾಜಕೀಯ ರಂಗ ಎರಡು ವಿಚಾರವಾಗಿಯೂ ತಮ್ಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಇದನ್ನೂ ಓದಿ:ಎಂ ಬಿ ಪಾಟೀಲ್- ಸಚಿವ ಅಶ್ವತ್ಥ್ ನಾರಾಯಣ್ ಭೇಟಿ ಬಗ್ಗೆ ನೋ ಕಮೆಂಟ್ಸ್: ಸಿದ್ದರಾಮಯ್ಯ