ಬೆಂಗಳೂರು: ಉಪ ಮುಖ್ಯಮಂತ್ರಿ ಸ್ಥಾನ ನೀಡುತ್ತಿದ್ದಂತೆ ರಾಜ್ಯ ಬಿಜೆಪಿಯಲ್ಲಿ ಭಾರೀ ಅಸಮಧಾನ ಸ್ಪೋಟಗೊಂಡಿದ್ದು ನೂತನ ಆರೋಗ್ಯ ಸಚಿವ ಬಿ.ಶ್ರೀರಾಮುಲು ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಹೈಕಮಾಂಡ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಡಿಸಿಎಂ ಹುದ್ದೆ ಬೇಡಿದ್ದು ಶ್ರೀರಾಮುಲು ಒಬ್ಬರೇ. ಆದರೆ ಡಿಸಿಎಂ ಹುದ್ದೆ ಕೇಳದವರಿಗೆ ಹುದ್ದೆ ನೀಡಲಾಗಿದೆ. 80 ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಶ್ರೀರಾಮುಲು ಪ್ರಚಾರ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ ಅವರನ್ನು ಕಡೆಗಣಿಸಿ ಇತರರಿಗೆ ಡಿಸಿಎಂ ಸ್ಥಾನ ನೀಡಲಾಗಿದೆ ಎಂದು ಕಿಡಿಕಾರಿರುವ ಅಭಿಮಾನಿಗಳು, ಬೆಂಬಲಿಗರು ದಯಮಾಡಿ ಶ್ರೀರಾಮುಲು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ. ಕೇವಲ ಶಾಸಕರಾಗಿರಿ, ಇಡೀ ವಾಲ್ಮೀಕಿ, ಎಸ್ಸಿ, ಎಸ್ಟಿ, ಒಬಿಸಿ ಸಮುದಾಯ ನಿಮ್ಮ ಬೆಂಬಲಕ್ಕಿದೆ ಎಂದಿದ್ದಾರೆ.
ಅಭಿಮಾನಿಗಳಿಂದ ಭಾರೀ ಆಕ್ರೋಶ:
ಬಿಜೆಪಿ ಹೈಕಮಾಂಡ್ ಮಾತ್ರವಲ್ಲ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಕೂಡ ಆಕ್ರೋಶ ವ್ಯಕ್ತವಾಗಿದ್ದು ವಾಲ್ಮೀಕಿ ಸಮುದಾಯಕ್ಕೆ ಕೇವಲ ಒಂದು ಸಚಿವ ಸ್ಥಾನ ನೀಡಿದ್ದೀರಿ. ಈ ಜಾತಿ ರಾಜಕಾರಣ ಹೆಚ್ಚು ದಿನ ನಡೆಯೊಲ್ಲ ಎಂದು ಕಿಡಿಕಾರಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧವೂ ಶ್ರೀರಾಮುಲು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.