ಬೆಂಗಳೂರು: ಕೇಂದ್ರ ಸರ್ಕಾರ ರೈತ ವಿರೋಧಿ ಮಸೂದೆಗಳನ್ನು ಹಾಗೂ ಕಾನೂನನ್ನು ಜಾರಿಗೆ ತರುತ್ತಿದೆ. ಇವುಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಯುವ ಕಾಂಗ್ರೆಸ್ ನಾಯಕರು ಸಹಿ ಅಭಿಯಾನ ಆರಂಭಿಸಿದ್ದಾರೆ.
ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಇಂದು ಸಹಿ ಸಂಗ್ರಹಣ ಚಳವಳಿಯಲ್ಲಿ ಭಾಗವಹಿಸಿ ಸಹಿ ಮಾಡುವುದರ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ರೈತ ವಿರೋಧಿ ಮಸೂದೆ ಹಾಗೂ ಕಾನೂನುಗಳನ್ನು ಕೂಡಲೇ ಕೇಂದ್ರ ಸರ್ಕಾರ ಕೈ ಬಿಡಬೇಕೆಂದು ಆಗ್ರಹಿಸಿದರು.
ಯುವ ಕಾಂಗ್ರೆಸ್ ನಾಯಕ ಮನೋಹರ್ ನೇತೃತ್ವದಲ್ಲಿ ಆರಂಭವಾಗಿರುವ ಸಹಿಸಂಗ್ರಹ ಅಭಿಯಾನದಲ್ಲಿ ಇಂದು ಸಾರ್ವಜನಿಕರು ಸಹ ಪಾಲ್ಗೊಂಡು ಕಾಂಗ್ರೆಸ್ ಸಹಿಸಂಗ್ರಹ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿದರು. ಪ್ರತಿಭಟನಾ ಮೆರವಣಿಗೆ ನಡೆಸಿ ಸಾರ್ವಜನಿಕರಿಂದ ಕೇಂದ್ರ ಸರ್ಕಾರದ ವಿರುದ್ಧ ಸಹಿ ಸಂಗ್ರಹ ಚಳುವಳಿ ಪ್ರಚಾರ ನಡೆಸಲಾಯಿತು. ಬೆಂಗಳೂರು ಮಹಾನಗರ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್ ಮನೋಹರ್ ಜಿ ಜನಾರ್ದನ್ ಇ ಶೇಖರ್ ಎ ಆನಂದ್ ಎಲ್ ಜಯಸಿಂಹ ಎಂ ಎ ಸಲೀಂ ಮತ್ತಿತರರು ಪಾಲ್ಗೊಂಡಿದ್ದರು.