ಬೆಂಗಳೂರು: ಸಚಿವ ರಮೇಶ್ ಜಾರಕಿಹೊಳಿ ಜೊತೆಗಿದ್ದವರಿಗೆ ನ್ಯಾಯ ಸಿಗಬೇಕೆಂದು ದೆಹಲಿ ಭೇಟಿ ವೇಳೆ ಮನವಿ ಮಾಡಿದ್ದಾರೆ ಎಂದು ಶಾಸಕ ಮಹೇಶ್ ಕುಮಟಳ್ಳಿ ಹೇಳಿದರು.
ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಆದ ಬಳಿಕ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಬಿಜೆಪಿ ವರಿಷ್ಠರು ಕೊಡುವ ಜವಾಬ್ದಾರಿ ಹುಮ್ಮಸ್ಸಿನಿಂದ ನಿರ್ವಹಿಸುತ್ತೇನೆ. ಪಕ್ಷ ಸಂಘಟನೆಯಿಂದ ಹಿಡಿದು ಯಾವುದೇ ಕೆಲಸ ಕೊಟ್ಟರೂ ಮಾಡುತ್ತೇನೆ ಎಂದರು. ಇಂದಿನ ಭೇಟಿಗೆ ಯಾವುದೇ ವಿಶೇಷ ಇಲ್ಲ, ಯಾವಾಗ ಬಂದರೂ ನಾನು ಊಟ, ತಿಂಡಿ ಜಾರಕಿಹೊಳಿಯವರ ಮನೆಯಲ್ಲೇ ಮಾಡುತ್ತೇನೆ ಎಂದರು.
ಅಥಣಿ ಕ್ಷೇತ್ರದ ನೀರಾವರಿ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರ ಭೇಟಿಗೆ ಬಂದಿದ್ದೆ. ಸಚಿವ ಸ್ಥಾನಕ್ಕೆ ಯಾವುದೇ ಲಾಬಿ ಇಲ್ಲ. ಅವರ ಇಲಾಖೆಯ ಕೆಲಸಕ್ಕೆ ದೆಹಲಿಗೆ ಹೋಗಿದ್ದರು ಅಷ್ಟೇ. ನನಗೆ ಪಕ್ಷದವರು ಕೊಡುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಹುದ್ದೆಗಿಂತಲೂ ಪಕ್ಷ ಸಂಘಟನೆ ಮಹತ್ವವಾದದ್ದು. ಈಗ ನನಗೆ ಸ್ಲಂ ಬೋರ್ಡ್ ಕೊಟ್ಟಿದ್ದಾರೆ, ನಾನು ಸಂತೋಷವಾಗಿದ್ದೇನೆ ಎಂದರು.