ಬೆಂಗಳೂರು: ಅದಾನಿ, ಅಂಬಾನಿ ನನ್ನ ದೊಡ್ಡಪ್ಪ ಚಿಕ್ಕಪ್ಪ ಅಲ್ಲ. ಉಳಿದವರು ನಮ್ಮ ಸೋದರ ಮಾವನ ಮಕ್ಕಳು ಅಲ್ಲವೆಂದು ಮಾಜಿ ಸ್ಪೀಕರ್, ಶಾಸಕ ರಮೇಶ್ ಕುಮಾರ್ ವಾಗ್ದಾಳಿ ನಡೆಸಿದರು.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡುತ್ತಾ, ದೇಶದ ಗಂಟು ತಿಂದವರು ಯಾರೇ ಆದರೂ ಅವರು ದೇಶದ್ರೋಹಿಗಳು. ರಾಬರ್ಟ್ ವಾದ್ರಾ ಮಾಡಿದರೆ ಆತನೂ ಮಣ್ಣು ತಿನ್ನುತ್ತಾನೆ. ನಾನೇನು ವಕಾಲತ್ತು ಹಾಕಿದ್ದೀನಾ ಎಂದು ಪ್ರಶ್ನಿಸಿದರು.
ಅದಾನಿ, ಅಂಬಾನಿ ಆಸ್ತಿ ಹೆಚ್ಚಳ ವಿಚಾರವಾಗಿ ಮಾತನಾಡುತ್ತಾ, ರಾಜ್ಯ ಅವರ ನೆಟ್ವರ್ಕ್ಗಿಂತ ಕಡಿಮೆ ಇದೆ. ಸ್ವಾತಂತ್ರ್ಯ, ಕ್ರಾಂತಿ ಎಲ್ಲಿಂದ ಎಲ್ಲಿಗೆ ಹೋಯ್ತು. 2014ರಲ್ಲಿ ಅದಾನಿ ಆಸ್ತಿ 4,270 ಲಕ್ಷ ಕೋಟಿ, 2021ರಲ್ಲಿ 50 ಬಿಲಿಯನ್ ಡಾಲರ್ ಆಗಿದೆ ಎಂದರು.
ರಮೇಶ್ ಕುಮಾರ್ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಯತ್ನಾಳ್, ಸ್ವಾತಂತ್ರ್ಯ ಬಂದ ಬಳಿಕ ರಾಜ್ಯವನ್ನು ಆಳಿದವರು ಯಾರು?, ಹಳೆಯ ಅಂಬಾನಿ, ಅದಾನಿ ಹೊಸದಾಗಿ ರಾಬರ್ಟ್ ವಾದ್ರಾ ಇರಬಹುದು. ದೇಶವನ್ನು 70 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ನವರು ಉತ್ತರ ಕೊಡಬೇಕು. ವಿಜಯ ಮಲ್ಯ, ನೀರವ್ ಮೋದಿಗೆ ಸಾಲ ಕೊಟ್ಟದ್ದು ಯಾರು?, ಕೇವಲ ಅದಾನಿ, ಅಂಬಾನಿಯ ಉದಾಹರಣೆ ಕೊಟ್ಟರೆ ಸಾಲದು. ರಾಬರ್ಟ್ ವಾದ್ರಾ ಎಷ್ಟು ಆಸ್ತಿ ಏರಿಕೆ ಆಗಿದೆ ಎಂಬ ಬಗ್ಗೆಯೂ ಹೇಳಬೇಕು ಎಂದು ಆಗ್ರಹಿಸಿದರು.
ವಕ್ಫ್ ಆಸ್ತಿ ನುಂಗಿದ್ದಾರೆ ಅಂತ ಹೇಳುತ್ತೀರಾ. ಮುಜರಾಯಿ ಆಸ್ತಿ ನುಂಗಿದವರಿಗೆ ಸನ್ಮಾನ ಮಾಡುವುದಾ, ದೇವರಿಗೆ ಪಂಗನಾಮ ಹಾಕ್ತೀರಾ, 1965ರಿಂದ ಈಚೆಗೆ ಯಾವ ಮುಜರಾಯಿ ಆಸ್ತಿಯನ್ನು ವರ್ಷಕ್ಕೆ ನೂರು ರೂ.ಗೆ ಲೀಸ್ಗೆ ಕೊಟ್ಟಿದ್ದೀರಾ ಎಂಬ ಬಗ್ಗೆ ತನಿಖೆ ಮಾಡಲಿ ಎಂದು ಒತ್ತಾಯಿಸಿದರು.