ಬೆಂಗಳೂರು: ಪಕ್ಷವನ್ನು ಬಲವಾಗಿ ಸಂಘಟಿಸುವ ನಿಟ್ಟಿನಲ್ಲಿ ಪ್ರಯತ್ನಕ್ಕೆ ಮುಂದಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಅದ್ಯಾಕೋ ದುರಾದೃಷ್ಟ ಬೆನ್ನುಹತ್ತಿ ಕಾಡುತ್ತಿರುವಂತಿದೆ. ಪಕ್ಷದಲ್ಲಿ ಆಂತರಿಕ ಕಲಹ ಒಂದು ಹಂತಕ್ಕೆ ಸಂಘಟನೆ ಹಾಗೂ ಪ್ರಗತಿಯನ್ನು ಕುಂಠಿತಗೊಳಿಸಿದ್ದರೆ ಇನ್ನೊಂದೆಡೆ ಪಕ್ಷದ ಹಿರಿಯ ನಾಯಕರು ನಾಯಕತ್ವಕ್ಕೆ ವಿಮುಖರಾಗಿ ಸಾಗುತ್ತಿರುವುದು ಮತ್ತೊಂದು ದೊಡ್ಡ ಸಂಕಷ್ಟವಾಗಿ ಎದುರಾಗಿದೆ.
ಮುಂಬರುವ ಬಿಬಿಎಂಪಿ ಸ್ಥಳೀಯ ಸಂಸ್ಥೆಗಳು ಹಾಗೂ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷ ಸಂಘಟನೆಗೆ ಮುಂದಾಗಿರುವ ಕಾಂಗ್ರೆಸ್ ರಾಜ್ಯ ನಾಯಕರು ಪಕ್ಷದ ವಿವಿಧ ಸಮಿತಿಗಳನ್ನು ರಚಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಾಲುಸಾಲು ಸೋಲುಗಳಿಂದ ಕಂಗೆಟ್ಟಿರುವ ಪಕ್ಷಕ್ಕೆ ತೋರಿತವಾಗಿ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಪ್ರಯತ್ನ ನಡೆಸಿದ್ದು, ಈ ನಿಟ್ಟಿನಲ್ಲಿ ನಡೆಸುತ್ತಿರುವ ಪ್ರಯತ್ನ ಕೆಲ ನಾಯಕರಲ್ಲಿ ಇನ್ನಷ್ಟು ಅಸಮಾಧಾನ ಸ್ಪೋಟಕ್ಕೆ ಕಾರಣವಾಗುತ್ತಿದೆ.
ಪಕ್ಷದಲ್ಲಿ ತಮಗೆ ಯಾವುದೇ ರೀತಿ ಮಾನ್ಯತೆ ಸಿಗುತ್ತಿಲ್ಲ ಎಂದು ಇತ್ತೀಚೆಗಷ್ಟೇ ಜೆಡಿಎಸ್ನತ್ತ ಮುಖ ಮಾಡಿರುವ ಮಾಜಿ ಕೇಂದ್ರ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಪಕ್ಷದಲ್ಲಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರು ನಡೆಸಿದ ಪ್ರಯತ್ನ ವಿಫಲವಾಗಿದೆ. ಈ ವಿಚಾರದಲ್ಲಿ ತಲೆ ಬಿಸಿ ಮಾಡಿಕೊಂಡಿರುವ ನಾಯಕರಿಗೆ ಈಗ ಮತ್ತೊಂದು ಹೊಸ ಸಂಕಷ್ಟ ಎದುರಾಗಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ವಿಧಾನಸಭೆ ಕಾರ್ಯನಿರ್ವಹಿಸಿದ್ದ ರಮೇಶ್ ಕುಮಾರ್ ಸರ್ಕಾರಕ್ಕೆ ಅನುಕೂಲವಾಗುವ ತೀರ್ಮಾನ ಕೈಗೊಂಡು ಪಕ್ಷದ ನಾಯಕರ ಶಭಾಷ್ಗಿರಿ ಗಿಟ್ಟಿಸಿದ್ದರು. ಸರ್ಕಾರ ಪತನವಾದರೆ ಇದಕ್ಕೆ ಕಾರಣರಾದ ಶಾಸಕರು ಸಾಕಷ್ಟು ಆತಂಕ ಎದುರಿಸುವ ಸ್ಥಿತಿ ತಂದಿಟ್ಟಿದ್ದರು. ಆ ಪಕ್ಷ ಇವರಿಗೆ ಉನ್ನತ ಸ್ಥಾನ ನೀಡಿ ಗೌರವಿಸುವ ಭರವಸೆ ನೀಡಿತ್ತು. ಆದರೆ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವಿನ ಆಂತರಿಕ ಕಲಹದ ಮಧ್ಯೆ ರಮೇಶ್ ಕುಮಾರ್ ಅನಾಥರಾದರು. ಪಕ್ಷ ಇವರಿಗೆ ಆಯಕಟ್ಟಿನ ಸ್ಥಾನ ಕಲ್ಪಿಸುವುದಿರಲಿ, ಪಕ್ಷದ ಯಾವ ಚಟುವಟಿಕೆಯನ್ನು ಇವರನ್ನ ಪರಿಗಣನೆಗೆ ಪಡೆಯದೇ ನಿರ್ಲಕ್ಷಿಸಿತ್ತು. ಇದೀಗ ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡಿರುವ ರಮೇಶ್ ಕುಮಾರ್ ತಾವೇ ಬೇರೆ ತಮ್ಮ ದಾರಿಯೇ ಬೇರೆ ಎನ್ನುವ ಮಾತನಾಡಲು ಆರಂಭಿಸಿದ್ದಾರೆ.
ಇಂದಿನ ಬೆಳವಣಿಗೆ: ಇಂದು ಏಕಾಏಕಿ ಆಮ್ ಆದ್ಮಿ ಪಕ್ಷದ ಶಾಂತಿನಗರ ಕಚೇರಿಗೆ ಭೇಟಿ ನೀಡಿ ಆಮ್ ಆದ್ಮಿ ಕ್ಲಿನಿಕ್ ವೀಕ್ಷಿಸಿದ ರಮೇಶ್ ಕುಮಾರ್ ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ರನ್ನ ಬಹುವಾಗಿ ಗುಣಗಾನ ಮಾಡಿದ್ದಲ್ಲದೇ, ಪಕ್ಷದ ನಾಯಕರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರ ಹಾಕುವ ಮೂಲಕ ತಾವು ಕೂಡ ರೆಬೆಲ್ ನಾಯಕ ಎನ್ನುವುದನ್ನು ಸೂಕ್ಷ್ಮವಾಗಿ ವ್ಯಕ್ತಪಡಿಸಿದ್ದಾರೆ.
ನಾನು ಆಮ್ ಆದ್ಮಿ: ನಾನು ಆಮ್ ಆದ್ಮಿ, ನಾನು ಕಾಮನ್ ಮ್ಯಾನ್. ನಾನು ಅಪೋಸಿಷನ್ ಅಲ್ಲ, ನಾನು ಆಮ್ ಆದ್ಮಿ. ಅಪೋಸೀಷನ್ ಬಗ್ಗೆ ಅಪೋಸೀಷನ್ ಲೀಡರ್ ಇದ್ದಾರೆ, ಅವರಿಗೆ ಕೇಳಿ. ಅದಕ್ಕೇ ನಾನು ಆಮ್ ಆದ್ಮಿ ಪಕ್ಷದ ಹತ್ತಿರ ಇದ್ದೀನಿ ಎಂದು ಆಮ್ ಆದ್ಮಿ ಪಕ್ಷದ ಬೋರ್ಡ್ ತೋರಿಸಿದ ರಮೇಶ್ ಕುಮಾರ್ ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.
ನಾನೇನು ಅಂಬಾನಿನಾ..? ನಾನೇನು ಶ್ರೀಮಂತನಾ..? ನಾನೇನು ಅದಾನಿನಾ..? ತೆಗೆದು ನೋಡಿ ನನ್ನ ಆಸ್ತಿ ವಿವರ. ಆಮ್ ಆದ್ಮಿ ಈ ಭವಿಷ್ಯದ ನಿರ್ಧಾರ ಮಾಡಬೇಕು. ಕೈಯಲ್ಲಿ ಆಗದಿದ್ದಾಗ ಏನು ಮಾಡೋದು..? ನನ್ನ ನಿಲುವು ನ್ಯೂಟ್ರಲ್ ಅಲ್ಲ, ಮೌನ. ನಾನೊಬ್ಬನೇ ಏಕಾಂಗಿಯಾಗಿ ಏನೂ ಮಾಡಲೂ ಸಾಧ್ಯವಿಲ್ಲ. ಅದಕ್ಕೇ ಮೌನ ವಹಿಸಿದ್ದೇನೆ. ನನ್ನದು ಬೇಸರದ ಮಾತಲ್ಲ, ಸತ್ಯ. ಸತ್ಯ ಮಾತಾಡಿದರೆ ನಿವ್ಯಾಕೆ ಬೇಸರ ಅಂದುಕೊಳ್ತೀರಿ..? ಮೋಡ ಕವಿದಿದೆ, ಮೋಡ ಸ್ಪಲ್ಪ ಸರಿಯಲಿ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಸಾಮಾನ್ಯ ಮನುಷ್ಯ: ಸಾಮಾನ್ಯ ಮನುಷ್ಯ ಎಲ್ಲಿ ಇರುತ್ತಾರೆ ಅಲ್ಲಿ ಇರುತ್ತೇನೆ. ಆ ಬೋರ್ಡ್ ಕಟ್ಟಿಕೊಂಡು ನನಗೆ ಏನ್ ಆಗಬೇಕು. ಎಲ್ಲ ವಲಯದಲ್ಲಿ ಅತ್ಯಂತ ದೊಡ್ಡವರು ಇದ್ದಾರೆ. ಅತ್ಯಂತ ಪ್ರಾಮಾಣಿಕರು ಬಂದಿದ್ದಾರೆ. ಅದಕ್ಕೆ ಊರಿನಲ್ಲಿ ಕೃಷಿ ಮಾಡಿಕೊಂಡಿದ್ದೇನೆ. ಕಾಂಗ್ರೆಸ್ನಿಂದ ದೂರ ಇಲ್ಲ, ಎಲ್ಲಾ ಕಡೆ ದೊಡ್ಡವರು ಬಂದಿದ್ದಾರೆ. ನ್ಯಾಯಾಂಗ, ಮಾಧ್ಯಮ, ರಾಜಕೀಯ ಎಲ್ಲಾ ಕಡೆ ದೊಡ್ಡವರು ಇದ್ದಾರೆ. ರಾಜಕೀಯ ಒಂದು ಅಕ್ಷರ ಮಾತಾಡುವುದಿಲ್ಲ. ನಾನು ಪಾಲಿ ಉಮ್ರಿಗರ್ ತಮ್ಮ. ಪಾಲಿ ಉಮ್ರಿಗರ್ ಅಂತ ಇಂಡಿಯನ್ ಪ್ಲೇಯರ್ ಇದ್ರು. ಅವರು ನೂರು ಓವರ್ ಬೌಲರ್ ಮಾಡ್ತಿದ್ರು, ಆದರೆ ಒಂದೂ ವಿಕೆಟ್ ತಗೊಳ್ತಿರಲಿಲ್ಲ, ಒಂದು ರನ್ ಕೊಡ್ತಿರಲಿಲ್ಲ. ಮೂರೂವರೆ ದಿನ ಬ್ಯಾಟಿಂಗ್ ಮಾಡ್ತಿದ್ರು, ಔಟು ಆಗೋದಿಲ್ಲ, ರನ್ ಹೊಡೆಯೋದಿಲ್ಲ. ಹಾಗೇ ನಾನು ಪಾಲಿ ಉಮ್ರಿಗರ್ ತಮ್ಮ. ನೀವು ಸಂಜೆವರೆಗೂ ಕೇಳಿದರೂ ನಾನು ಹೇಳೋದು ಇಷ್ಟೇ ನಿಮಗೆ ಮಸಾಲೆ ಸಿಗೋದಿಲ್ಲ ಎಂದು ಮಾಧ್ಯಮಗಳಿಗೆ ಚುರುಕು ಮುಟ್ಟಿಸಿದ್ದಾರೆ.
ಡಿಕೆಶಿ ವಿರುದ್ಧ ಬೇಸರ?: ಸಂಕಲ್ಪ ಮಾಡದವರು ಸಮಾವೇಶ ಮಾಡಿದಾರೆ. ನಾನು ಮೊದಲೇ ಸಂಕಲ್ಪ ಮಾಡಿಕೊಂಡಿದ್ದೇನೆ, ಕಾಂಗ್ರೆಸ್ ದೃಢವಾಗಿರಬೇಕು ಅಂತ ಸಂಕಲ್ಪ ಮಾಡಿಕೊಂಡಿದ್ದೇನೆ ಎನ್ನುವ ಮೂಲಕ ಡಿಕೆ ಶಿವಕುಮಾರ್ಗೆ ರಮೇಶ್ ಕುಮಾರ್ ಟಾಂಗ್ ಕೊಟ್ಟಿದ್ದಾರೆ.
ಮತಬ್ಯಾಂಕ್ ಅಲ್ಲ: ಬ್ರಾಹ್ಮಣ ಸಮುದಾಯ ಕಾಂಗ್ರೆಸ್ ಮತಬ್ಯಾಂಕ್ ಅಲ್ಲ. ಈ ಹಿನ್ನೆಲೆ ತಮಗೆ ಮತ ನೀಡದ ಸಮುದಾಯದವರಿಗೆ ಮಾನ್ಯತೆ ನೀಡಿದರೂ ಯಾವುದೇ ಪ್ರಯೋಜನವಿಲ್ಲ ಎಂಬ ಯೋಚನೆ ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕರು ಮಾಡಿದಂತಿದೆ. ಈ ಹಿನ್ನೆಲೆ ಸ್ಪೀಕರ್ ಆಗಿದ್ದ ರಮೇಶ್ ಕುಮಾರ್ಗೆ ಯಾವುದೇ ಆಯಕಟ್ಟಿನ ಸ್ಥಾನಮಾನ ಇಲ್ಲವೇ ಜವಾಬ್ದಾರಿ ಕಲ್ಪಿಸುವ ಕಾರ್ಯವನ್ನು ಮಾಡಿಲ್ಲ. ಇದರ ಜೊತೆ ಜೊತೆಗೆ ಸಾಕಷ್ಟು ನಿರ್ಲಕ್ಷಿಸುವ ಕಾರ್ಯವನ್ನು ಮಾಡಿ ರಮೇಶ್ ಕುಮಾರ್ ಅಸಮಾಧಾನಕ್ಕೆ ಕಾರಣವಾಗಿದೆ. ರಮೇಶ್ ಕುಮಾರ್ ಪಕ್ಷ ಬಿಟ್ಟು ಬೇರೆಡೆ ತೆರಳಿ ನೆಲೆ ಕಾಣುವ ಉತ್ಸಾಹ ಅಥವಾ ಆಸಕ್ತಿ ಹೊಂದಿರದ ಹಿನ್ನೆಲೆ ಪಕ್ಷದಲ್ಲಿದ್ದು ಒಂದಿಷ್ಟು ರೆಬೆಲ್ ಚಟುವಟಿಕೆಯಲ್ಲಿ ತೊಡಗುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ತಮ್ಮ ಕ್ಷೇತ್ರದಲ್ಲಿಯೂ ಸಾಕಷ್ಟು ಜನಪ್ರಿಯತೆ ಕಳೆದುಕೊಂಡಿರುವ ಅವರು ಮುಂಬರುವ ಚುನಾವಣೆಗಳಲ್ಲಿ ಸ್ಪರ್ಧಿಸುವ ಬದಲು ತಟಸ್ಥವಾಗಿ ಉಳಿದುಕೊಳ್ಳುವ ಸಾಧ್ಯತೆ ಹೆಚ್ಚಿದೆ.