ಬೆಂಗಳೂರು: ಚಿಕ್ಕೋಡಿ ಟಿಕೆಟ್ ವಂಚಿತ ರಮೇಶ್ ಕತ್ತಿ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ವಂಚಿತೆ ತೇಜಸ್ವಿನಿ ಅನಂತ್‌ಕುಮಾರ್ ಅವರಿಗೆ ಒಳ್ಳೆಯ ಸ್ಥಾನಮಾನ ನೀಡಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದ 28 ಲೊಕಸಭಾ ಕ್ಷೇತ್ರಗಳಲ್ಲಿ 26 ಕ್ಷೇತ್ರಗಳಿಗೆ ನಮ್ಮ ಶಿಫಾರಸಿನಂತೆ ಹೈಕಮಾಂಡ್ ಟಿಕೆಟ್ ಪ್ರಕಟಿಸಿದೆ. ಮಂಡ್ಯದಲ್ಲಿ ಅಭ್ಯರ್ಥಿ ನಿಲ್ಲಿಸದೇ ಸುಮಲತಾ ಅವರನ್ನು ಬೆಂಬಲಿಸುವ ನಿಲುವನ್ನೂ ಪುರಸ್ಕರಿಸಿತ್ತು. ಬೆಳಗಾವಿ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮಾತ್ರ ವ್ಯತ್ಯಾಸವಾಗಿದೆ. ಇದರಲ್ಲಿ ಆರ್ಎಸ್ಎಸ್ ಪಾತ್ರ ಇಲ್ಲ. ಆ ಎರಡು ಕ್ಷೇತ್ರದ ಟಿಕೆಟ್ ವಂಚಿತರನ್ನು ಕರೆದು ಮಾತುಕತೆ ನಡೆಸಿ, ಮುಂದೆ ಅವರಿಗೆ ಒಳ್ಳೆಯ ಸ್ಥಾನಮಾನ ಕೊಡಿಸುತ್ತೇವೆ ಎಂದು ರಮೇಶ್ ಕತ್ತಿ, ತೇಜಸ್ವಿನಿ ಅನಂತ್‌ಕುಮಾರ್ ಅವರಿಗೆ ಸದ್ಯದಲ್ಲೇ ಸೂಕ್ತ ಸ್ಥಾನಮಾನ ನೀಡುವ ಸುಳಿವು ನೀಡಿದರು.
ದಕ್ಷಿಣದಲ್ಲಿ ಬಿಜೆಪಿ ತಲೆ ಎತ್ತಲು ಬಿಡಲ್ಲ ಅಂತ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿಕೆ ಕೊಟ್ಟಿದ್ದಾರೆ. ನೀವು ನಿಮ್ಮ ಕುಟುಂಬ, ಮಕ್ಕಳು, ಮೊಮ್ಮಕ್ಕಳಿಗೆ ಆದ್ಯತೆ ಕೊಟ್ಟಿದ್ದೀರಾ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ - ಜೆಡಿಎಸ್ ಮಧ್ಯೆ ಒಡಕಿಗೆ ಕಾರಣ ಆಗಿದ್ದೀರ. ತುಮಕೂರಿನಲ್ಲಿ ಕೈ ಕಾಲು ಕಟ್ಟಿ ಅಲ್ಲಿನ ಅಭ್ಯರ್ಥಿ ನಾಮಪತ್ರ ವಾಪಸ್ ತಗೊಳ್ಳೊ ಹಾಗೆ ಮಾಡಿದ್ದೀರಿ. ಮೊದಲು ತುಮಕೂರಿನಲ್ಲಿ ಗೆದ್ದು ಬನ್ನಿ, ಆಮೇಲೆ ಮಾತಾಡಿ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ಬಿ.ಎಸ್.ಯಡಿಯೂರಪ್ಪ ಸವಾಲ್ ಎಸೆದರು.
ಎಂಥ ಅತಿರಥ ಮಹಾರಥರೇ ಬಿಜೆಪಿಯನ್ನು ದಕ್ಷಿಣ ಭಾರತದಲ್ಲಿ ಕಿತ್ತು ಹಾಕಲು ಪ್ರಯತ್ನ ಪಟ್ಟರು. ಅವರಿಂದಲೇ ಬಿಜೆಪಿ ಬೆಳವಣಿಗೆ ತಡೆಯಕ್ಕಾಗಲಿಲ್ಲ. ಇನ್ನು ನಿಮ್ಮಿಂದ ಅದು ಸಾಧ್ಯವೇ? ಸುಳ್ಳು ಭರವಸೆ ಕೊಟ್ಟರೂ ನೀವು 37 ಸೀಟು ತೆಗೆದುಕೊಂಡಿರಿ. ಕರ್ನಾಟಕದಲ್ಲಿ ನಿಮ್ಮ ಅಡ್ರೆಸ್ಸೇ ಇಲ್ಲ. ಅಂಥಾದ್ರಲ್ಲಿ ಬಿಜೆಪಿ ಅಡ್ರೆಸ್ ಇಲ್ಲದಂತೆ ಮಾಡ್ತೀನಿ ಅನ್ನೋದು ಹಾಸ್ಯಾಸ್ಪದ. ಹಗುರವಾಗಿ ಮಾತಾಡಬೇಡಿ. ಮಾಜಿ ಪ್ರಧಾನಿ ಅಂತ ಮರೆತು ಕೆಳಮಟ್ಟಕ್ಕೆ ಇಳಿದು ಮಾತಾಡಬೇಡಿ. ಹಗುರ ಮಾತು ಬಿಟ್ಟು ಮಾಜಿ ಪ್ರಧಾನಿ ಹಾಗೆ ನಡೆದುಕೊಳ್ಳಿ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರ ರಚನೆ ಮಾಡಲು ತಮಗೆ ಅಮಿತ್ ಶಾ ಆಹ್ವಾನ ಕೊಟ್ಟಿದ್ದರು ಅಂತ ದೇವೇಗೌಡರು ಹೇಳಿದ್ದಾರೆ. ಆದರೆ ಈಗ ಯಾಕೆ ದೇವೇಗೌಡ್ರು ಇದನ್ನು ಹೇಳಿದಾರೆ? ಇಷ್ಟು ದಿನ ದೇವೇಗೌಡ್ರು ಯಾಕೆ ಇದರ ಬಗ್ಗೆ ಮಾತಾಡಲಿಲ್ಲ ಎಂದು ದೇವೇಗೌಡರಿಗೆ ಯಡಿಯೂರಪ್ಪ ಪ್ರಶ್ನಿಸಿದರು. ತೇಜಸ್ವಿ ಸೂರ್ಯ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ದಾಖಲಾಗಿರುವ ಬಗ್ಗೆ ಪ್ರತಿಕ್ರಯಿಸಲು ಯಡಿಯೂರಪ್ಪ ನಿರಾಕರಿಸಿದರು. ಪ್ರಶ್ನೆ ಎದುರಾಗುತ್ತಿದ್ದಂತೆ ಉತ್ತರ ನೀಡದೇ ನಿರ್ಗಮಿಸಿದರು.