ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ನೇರವಾಗಿ ವಾಗ್ದಾಳಿ ನಡೆಸಿದರು. ಇಷ್ಟು ದಿನ ಹೆಸರು ಹೇಳದೆ ಆರೋಪ ಮಾಡುತ್ತಿದ್ದ ರಮೇಶ್ ಜಾರಕಿಹೊಳಿ ಇಂದು ಡಿಕೆಶಿ ವಿರುದ್ಧ ಕೆಂಡಕಾರಿದರು.
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ನನ್ನ ಮಾಧ್ಯಮಗೋಷ್ಟಿಗೆ ಈಗ ಮಹತ್ವ ಇಲ್ಲ. ನಾನು ನಿನ್ನೆ ಹೇಳಿದ ಪ್ರಕಾರ ಸಂಜೆ 4 ರಿಂದ 6 ಗಂಟೆಯೊಳಗೆ ಮಹತ್ವದ ವಿಚಾರವನ್ನು ಬಹಿರಂಗಪಡಿಸುತ್ತೇನೆ ಎಂದಿದ್ದೆ. ಈಗ ಮಹಾನಾಯಕ ಯಾರು ಎಂದು ಸಿಡಿ ಲೇಡಿಯ ಪೋಷಕರೇ ಹೇಳಿದ್ದಾರೆ. ಪೋಷಕರು ಒಪ್ಪಿಕೊಂಡಿದ್ದಾರೆ. ನರೇಶ್ ಗೌಡನ ಜೊತೆ ಸಂಬಂಧ ಇದೆ ಎಂದು ಡಿಕೆಶಿ ಒಪ್ಪಿಕೊಂಡಿದ್ದಾನೆ. ಮಹಾನಾಯಕ ನಾಲಾಯಕ್ ಅವನು. ಆತ ರಾಜಕೀಯದಲ್ಲಿರಬಾರದು. ಅವನಿಗೆ ಕ್ಷಮೆ ಎಂಬುದು ಇರಬಾರದು. ಕಾಂಗ್ರೆಸ್ ಅವನನ್ನು ಪಕ್ಷದಲ್ಲಿ ಮುಂದುವರಿಸಬಾರದು ಎಂದು ಏಕವಚನದಲ್ಲೇ ಮಾತನಾಡಿದರು.
ಡಿ.ಕೆ.ಶಿವಕುಮಾರ್ ವಿರುದ್ಧ ದೂರು ನೀಡುತ್ತೇನೆ. ಆತನನ್ನು ಜೈಲಿಗೆ ಕಳುಹಿಸುತ್ತೇನೆ. ಅವನು ಕ್ರಿಮಿನಲ್ ಮೈಂಡ್ ಮನುಷ್ಯ. ಅವತ್ತು ಯಾಕೆ ಸದನದಲ್ಲಿ ಇದನ್ನೆಲ್ಲ ಹೇಳಲಿಲ್ಲ. ಅವನನ್ನು ಸೋಲಿಸಲು ನಾನು ಏನು ಬೇಕಾದರೂ ಮಾಡುತ್ತೇನೆ. ಅವನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕುತ್ತೇನೆ. ಕನಕಪುರದಲ್ಲಿ ಅವನ ವಿರುದ್ಧ ನಾನು ಹೋರಾಡುತ್ತೇನೆ. ಆತ ಉಪಸಮರದ ವೇಳೆ ಬೆಳಗಾವಿಗೆ ಬಂದಾಗ ಏನು ಮಾಡಲ್ಲ. ಆದರೆ ಮುಂದಿನ ಚುನಾವಣೆಯಲ್ಲಿ ನಾನು ಅವನ ವಿರುದ್ಧ ಹೋರಾಡುತ್ತೇನೆ. ನನ್ನ ತಮ್ಮನನ್ನು ಬೇಕಾದರೆ ಗೋಕಾಕ್ ನಲ್ಲಿ ನಿಲ್ಲಿಸುತ್ತೇನೆ. ಡಿಕೆಶಿಯನ್ನು ಸೋಲಿಸಲು ನನ್ನ ತನುಮನವನ್ನು ಪಣಕ್ಕಿಡುತ್ತೇನೆ. ಇದಕ್ಕಾಗಿ ಬೇಕಾದರೆ ಕುಮಾರಸ್ವಾಮಿ ಜೊತೆ ಕೈ ಜೋಡಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ನಾನು ಇವತ್ತು ಡಿಕೆಶಿ ಹೆಸರು ಉಲ್ಲೇಖಿಸಿ ದೂರು ಕೊಡ್ತೇನೆ. ಆ ಹುಡುಗಿ ಏನಾದ್ರು ಸಾವನ್ನಪ್ಪಿದ್ರೆ ಡಿಕೆಶಿಯೇ ಕಾರಣ. ದೇಶದಲ್ಲಿ ಕಾನೂನಿದೆ, ಹೆದರಬೇಡಿ. ನಿನ್ನೆ ಒಂದು ಆಡಿಯೋಗೆ ಅಲ್ಲೋಲ ಕಲ್ಲೋಲ ಆಗಿದೆ. ನನ್ನದು ತಪ್ಪು ಇದ್ರೆ ನನ್ನ ಒದ್ದು ಒಳಗೆ ಹಾಕಿ. ಮಹಾನಾಯಕನ ತಪ್ಪು ಇದ್ರೆ ಅವನನ್ನು ಒಳಗೆ ಹಾಕಿ, ಹುಡುಗಿಯದ್ದು ತಪ್ಪಿದ್ರೆ ಅವಳಿಗೂ ಅದೇ ಶಿಕ್ಷೆ ಕೊಡಿ ಎಂದು ರಮೇಶ್ ಜಾರಕಿಹೊಳಿ ಆಗ್ರಹಿಸಿದರು.
ಅವನು ರಾಜಕೀಯ ನಿವೃತ್ತಿ ಪಡೆಯೋದು ಒಳ್ಳೆಯದು. ಆ ಹೆಣ್ಣುಮಗಳ ಬಗ್ಗೆ ನನಗೆ ಗೊತ್ತಿಲ್ಲ. ಅವಳಿಗೂ ನನಗೂ ಸಂಬಂಧ ಇಲ್ಲ. ಜಾರಕಿಹೊಳಿ ಕುಟುಂಬ ಯಾವ ಯುವತಿಗೂ ಮೋಸ ಮಾಡಿಲ್ಲ. ಸಿಡಿ ಪ್ರಕರಣ ಸಂಬಂಧ ನನ್ನ ಬಳಿ ಇನ್ನೂ 11 ದಾಖಲೆಗಳಿವೆ. ಅದನ್ನೆಲ್ಲಾ ನಾನು ಎಸ್ಐಟಿಗೆ ಕೊಡುತ್ತೇನೆ ಎಂದು ತಿಳಿಸಿದರು.