ಬೆಂಗಳೂರು: ಸಂಪುಟ ವಿಸ್ತರಣೆ ವಿಳಂಬಕ್ಕೆ ನಮಗೆ ಯಾವುದೇ ರೀತಿಯ ಅಸಮಾಧಾನ ಇಲ್ಲ, ನಾನು ಡಿಸಿಎಂ ಸ್ಥಾನವನ್ನು ಕೇಳಿಯೂ ಇಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ತೆರಳಿದ್ದಾರೆ. ವರಿಷ್ಠರ ಜೊತೆ ಸಂಪುಟ ವಿಸ್ತರಣೆ ಕುರಿತು ಮಾತುಕತೆ ನಡೆಸಲಿದ್ದಾರೆ. ಸಂಪುಟ ವಿಸ್ತರಣೆ ಇಂದು ಮಾಡುತ್ತಾರೋ, ನಾಳೆ ಮಾಡುತ್ತಾರೋ, ಸೋಮವಾರ ಮಾಡುತ್ತಾರೋ ಇಲ್ಲ ಇನ್ನ ಹತ್ತು ದಿನ. ಬಿಟ್ಟು ಮಾಡುತ್ತಾರೋ ಅದು ಮುಖ್ಯಮಂತ್ರಿಗಳ ಪರಮಾಧಿಕಾರ ಅವರು ಆ ಬಗ್ಗೆ ನಿರ್ಧರಿಸಲಿದ್ದಾರೆ ಎಂದರು.
ಉಪ ಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಸಚಿವ ಸ್ಥಾನ ಕೊಡಲೇಬೇಕು ಅದಕ್ಕೋಸ್ಕರ ನಾವು ಒತ್ತಾಯ ಮಾಡುತ್ತಿದ್ದೇವೆ ಆದರೆ ಈಗಲೇ ಕೊಡಿ ಅನ್ನುವ ಬೇಡಿಕೆ ಇಡಲ್ಲ ಎಂದರು.
ಸಂಪುಟ ವಿಸ್ತರಣೆ ವಿಳಂಬವಾಗುತ್ತಿದೆ ಎಂದು ನಮಗೆ ಯಾವುದೇ ಬೇಜಾರಿಲ್ಲ, ಇನ್ನು ಒಂದು ತಿಂಗಳು ಬೇಕಾದರೂ ಆಗಲಿ ನಾವು ಕಾಯುತ್ತೇವೆ, ಸಂಪುಟ ವಿಸ್ತರಣೆ ಈಗಲೇ ಆಗಬೇಕು ಎನ್ನುವ ಪಟ್ಟು ನಮ್ಮದಲ್ಲ ಎಂದರು.
ಉಪಮುಖ್ಯಮಂತ್ರಿ ಸ್ಥಾನವನ್ನು ನಾವು ಕೇಳಿಯೇ ಇಲ್ಲ ಇನ್ನು ಡಿಸಿಎಂ ಹುದ್ದೆ ಕೈತಪ್ಪುವ ಪ್ರಶ್ನೆ ಎಲ್ಲಿಂದ ಬರಲಿದೆ ಎಂದು ಡಿಸಿಎಂ ಹುದ್ದೆಯ ಅಪೇಕ್ಷೆ ಇಲ್ಲ ಎಂದು ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.