ಬೆಂಗಳೂರು : ಸಿ.ಪಿ.ಯೋಗೇಶ್ವರ್ಗೆ ಸಚಿವ ಸ್ಥಾನ ನೀಡುವುದು, ಬಿಡುವುದು ಹೈಕಮಾಂಡ್ ಮತ್ತು ಸಿಎಂ ಯಡಿಯೂರಪ್ಪಗೆ ಬಿಟ್ಟ ವಿಚಾರ. ಆದರೆ, ಯೋಗೇಶ್ವರ್ಗೆ ಸಚಿವ ಸ್ಥಾನ ನೀಡುವಂತೆ ಕಡೆ ಕ್ಷಣದವರೆಗೂ ಹೋರಾಟ ನಡೆಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಯೋಗೇಶ್ವರ್ ನನ್ನ ಗೆಳೆಯ. ಅವರನ್ನು ಸಚಿವರನ್ನಾಗಿ ಮಾಡಬಾರದು, ಸೋತವರನ್ನು ಸಚಿವರನ್ನಾಗಿ ಮಾಡಬೇಡಿ ಎಂದು ಕೆಲ ಶಾಸಕರು ನನ್ನನ್ನು ಭೇಟಿ ಮಾಡಿ ಹೇಳಿರುವುದು ನಿಜ. ಆದರೆ, ಯೋಗೇಶ್ವರ್ಗೆ ಸಚಿವ ಸ್ಥಾನ ನೀಡುವಂತೆ ಹೋರಾಡುವುದು ನನ್ನ ಧರ್ಮ ಮತ್ತು ಕರ್ತವ್ಯ. ಇದನ್ನು ಸಿಪಿವೈ ವಿರುದ್ಧ ಹೇಳಿಕೆ ನೀಡಿದ್ದ ಶಾಸಕರಿಗೂ ತಿಳಿಸಿದ್ದೇನೆ ಎಂದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಚೇರಿ ಪೂಜೆ ಇರುವುದರಿಂದ ಇಂದು ದೆಹಲಿಗೆ ತೆರಳುತ್ತಿದ್ದೇನೆ. ನಾನು ಕಾಂಗ್ರೆಸ್ನಲ್ಲಿದ್ದಾಗಲೂ ಸಿ.ಟಿ.ರವಿ ಅವರಿಗೆ ಆತ್ಮೀಯನಾಗಿದ್ದೆ. ಅವರು ನನ್ನ ಗೆಳೆಯನಾಗಿರುವುದರಿಂದ ಪೂಜೆಯಲ್ಲಿ ಭಾಗಿಯಾಗುತ್ತಿದ್ದೇನೆ ಎಂದರು. 105 ಶಾಸಕರು ಸರ್ಕಾರ ಬರಲು ಕಾರಣ ಎನ್ನುವ ರೇಣುಕಾಚಾರ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಅದೂ ಕೂಡ ನಿಜವೇ ಎನ್ನುತ್ತಾ ನಿರ್ಗಮಿಸಿದರು.
ಪ್ರಭಾಕರ್ ಕೋರೆ ಚಹಾ ಕುಡಿಯಲು ನಮ್ಮ ಮನೆಗೆ ಬಂದಿದ್ದರು ಈ ಭೇಟಿ ವೇಳೆ ಬೇರೆ ಏನೂ ಮಾತನಾಡಿಲ್ಲ ಕೇವಲ ನೀರಾವರಿ ಇಲಾಖೆ ಬಗ್ಗೆ ಚರ್ಚೆ ಮಾಡಿದ್ದಾರೆ ಅಷ್ಟೇ ಎಂದರು.