ಬೆಂಗಳೂರು: ರಾಸಲೀಲೆ ಸಿಡಿ ಬೆಳಕಿಗೆ ಬಂದ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅಜ್ಞಾತವಾಗಿದ್ದ ರಮೇಶ್ ಜಾರಕಿಹೊಳಿ ನಾಳೆ ಮಾಧ್ಯಮಗಳ ಮುಂದೆ ಮೊದಲ ಬಾರಿಗೆ ಬರುತ್ತಿದ್ದಾರೆ.
ಕೆಲವು ದಿನಗಳಿಂದ ಅಜ್ಞಾತವಾಗಿದ್ದ ರಮೇಶ್ ಜಾರಕಿಹೊಳಿ ಜೊತೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾತುಕತೆ ನಡೆಸಿದ್ದರು. ಈ ವೇಳೆ ಬಹಿರಂಗವಾಗಿ ಕಾಣಿಸಿಕೊಂಡು ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡಬೇಕು ಎಂದು ಮನವೊಲಿಕೆ ಮಾಡಿದ್ದು ಸುದ್ದಿಗೋಷ್ಠಿ ನಡೆಸಲು ರಮೇಶ್ ಜಾರಕಿಹೊಳಿ ನಿರ್ಧರಿಸಿದ್ದಾರೆ.
ನಿನ್ನೆಯಷ್ಟೇ ರಮೇಶ್ ಸಹೋದರ ಬಾಲಚಂದ್ರ ಜಾರಕಿಹೊಳಿ ಸುದ್ದಿಗೋಷ್ಟಿ ನಡೆಸಿ, ರಮೇಶ್ ಜೊತೆ ಮಾತುಕತೆ ನಡೆಸಿ ಪೊಲೀಸ್ ಠಾಣೆಯಲ್ಲಿ ದೂರು ಕೊಡುವಂತೆ ಹೇಳುವುದಾಗಿ ತಿಳಿಸಿದ್ದರು. ಜೊತೆಗೆ ಇನ್ನೊಂದು ತಿಂಗಳ ಕಾಲ ಪೂರ್ಣವಾಗಿ ಘಟನೆಯ ಬೆನ್ನು ಹತ್ತಿ ಪ್ರಕರಣದ ಹಿಂದಿರುವವರ ಪತ್ತೆ ಮಾಡುವ ಘೋಷಣೆ ಮಾಡಿದ್ದರು.
ದೂರುದಾರ ದಿನೇಶ್ ಕಲ್ಲಹಳ್ಳಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದು, ಪ್ರಕರಣದ ತನಿಖೆಗೆ ಆಗ್ರಹಿಸಿ ದೂರು ನೀಡುವುದು ಹಾಗು ಸ್ವಯಂ ಜಾರಕಿಹೊಳಿ ಕುಟುಂಬ ಒಟ್ಟಾಗಿ ಖಾಸಗಿ ತನಿಖೆ ನಡೆಸುವ ಕುರಿತು ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಹಾಗಾಗಿ ನಾಳೆ ನಡೆಯಲಿರುವ ಸುದ್ದಿಗೋಷ್ಟಿ ಕುತೂಹಲ ಮೂಡಿಸಿದೆ.