ಬೆಂಗಳೂರು: ಭಾಷೆಯ ಕಾರಣಕ್ಕೆ ಚಂದ್ರು ಕೊಲೆಯಾಗಿದ್ದರೆ ಅಪರಾಧಿಗಳನ್ನು ಪಾಕಿಸ್ತಾನಕ್ಕೆ ಓಡಿಸಬೇಕು ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ಸಿ.ಟಿ.ರವಿ ಚಂದ್ರು ಕೊಲೆ ವಿಷಯವನ್ನು ಮುನ್ನೆಲೆಗೆ ತಂದು ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಸಿ.ಟಿ.ರವಿ ರಾಜ್ಯದಲ್ಲಿ ವಿವಾದದ ವಿಷಯ ಇಲ್ಲದಿರುವಾಗಲೂ ಏನಾದರೊಂದು ವಿಷಯವನ್ನು ಕ್ರಿಯೇಟ್ ಮಾಡ್ತಾರೆ. ನಾವು ಎಲ್ಲಾ ಕಡೆ ದೂರು ನೀಡಿದ್ದೇವೆ. ಆದರೆ, ಇಲ್ಲಿಯವರೆಗೆ ಅವರ ವಿರುದ್ಧ ಎಫ್ಐಆರ್ ದಾಖಲಾಗಿಲ್ಲ ಎಂದರು.
ಘರ್ಷಣೆಯಿಂದ ಚಂದ್ರು ಹತ್ಯೆ ಅಂತ ಆಯುಕ್ತರು ಹೇಳ್ತಾರೆ. ಉರ್ದು ಭಾಷೆ ಬರಲಿಲ್ಲ ಅದಕ್ಕೆ ಹತ್ಯೆಯಾಗಿದೆ ಅಂತ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳ್ತಾರೆ. ಕಮಲ್ ಪಂತ್ ಟ್ವೀಟ್ ಮಾಡಿದ್ರೂ ರಾಂಗ್ ಮೆಸೇಜ್ ಹೋಗಿದೆ. ಗೃಹ ಸಚಿವರು ರಾಂಗ್ ಮೆಸೇಜ್ ಕೊಟ್ಟಿದ್ದಾರೆ. ಹೆಣ ಬಿದ್ರೆ ಬಿಜೆಪಿಯವರು ರಾಜಕಾರಣ ಮಾಡ್ತಾರೆ ಎಂದು ಕಿಡಿಕಾರಿದರು.
ನಿಷ್ಪ್ರಯೋಜಕ ಗೃಹ ಸಚಿವ: ಇದೇ ವೇಳೆ ಮಾತನಾಡಿದ ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಆರಗ ಜ್ಞಾನೇಂದ್ರ ನಿಷ್ಪ್ರಯೋಜಕ ಗೃಹ ಸಚಿವ. ಅವರ ವಿರುದ್ಧ ಸುಮೋಟು ಅಡಿ ಪ್ರಕರಣ ದಾಖಲಿಸಬೇಕು. ಪೊಲೀಸರು ಜೀವಂತವಿದ್ದರೆ ಕೇಸ್ ಹಾಕಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: ಇಂದಿರಾ ಕ್ಯಾಂಟೀನ್ ಇಸ್ಕಾನ್ ಹೆಗಲಿಗೆ ನೀಡಲು ಮುಂದಾದ ಬಿಬಿಎಂಪಿ