ಬೆಂಗಳೂರು : ಒಬ್ಬ ಸಮರ್ಥ ಹಾಗೂ ಸಜ್ಜನ ವ್ಯಕ್ತಿಯನ್ನು ರಾಜ್ಯಸಭೆಗೆ ಎರಡನೇ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದು, ಗೆಲ್ಲುವ ವಿಶ್ವಾಸವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ರಾಜ್ಯಸಭೆ ಅಭ್ಯರ್ಥಿಗಳಾಗಿ ಜಯರಾಮ್ ರಮೇಶ್ ಹಾಗೂ 2ನೇ ಅಭ್ಯರ್ಥಿಯಾಗಿ ಮನ್ಸೂರ್ ಅಲಿ ಖಾನ್ ನಾಮಪತ್ರ ಸಲ್ಲಿಕೆ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಒಬ್ಬ ಸಜ್ಜನ ವ್ಯಕ್ತಿ. ಯುವಕನಿಗೆ ಎರಡನೇ ಅಭ್ಯರ್ಥಿಯನ್ನಾಗಿ ಸ್ಪರ್ಧಿಸಲು ಅವಕಾಶ ಕೊಟ್ಟಿದ್ದೇವೆ. ಅವರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಾರೆ. ಎಲ್ಲ ಶಾಸಕರು ತಮ್ಮ ಆತ್ಮಸಾಕ್ಷಿಯಿಂದ ಇವರಿಗೆ ಮತ ನೀಡಬೇಕು ಎಂದು ಕೋರುತ್ತೇವೆ ಎಂದರು.
ರಾಜ್ಯಸಭೆ ಚುನಾವಣೆಯಲ್ಲಿ ಎರಡನೇ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮತಗಳ ಕೊರತೆ ಎದುರಾದರೂ ಸಹ ಮನ್ಸೂರ್ ಅಲಿ ಖಾನ್ ಗೆಲ್ಲುತ್ತಾರೆ ಎಂಬ ವಿಶ್ವಾಸ ಇದೆ. ನಾವು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇವೆ. ಪಕ್ಷ, ನಮ್ಮ ನಾಯಕರು ಹಾಗೂ ದೆಹಲಿ ವರಿಷ್ಠರು ಏನು ನಿರ್ಧಾರ ಕೈಗೊಳ್ಳುತ್ತಾರೋ ಅದನ್ನು ಪಾಲಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಜೆಡಿಎಸ್ ಬೆಂಬಲ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅವರು ನಮ್ಮಲ್ಲಿ ಬೆಂಬಲವನ್ನು ಕೋರಿದ್ದಾರೆ. ನಾವು ನಮಗೆ ಬೆಂಬಲ ನೀಡಿ ಎಂದು ಮನವಿ ಮಾಡಿದ್ದೇವೆ. ಮುಂದೆ ಏನಾಗಲಿದೆ ಎಂದು ನೋಡೋಣ ಎಂದು ಹೇಳಿದರು. ಕರ್ನಾಟಕಕ್ಕೆ ಜೈರಾಮ್ ರಮೇಶ್ ಕೊಡುಗೆ ಏನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಅವರು ಕರ್ನಾಟಕ ಮೂಲದವರು, ಇಡೀ ರಾಷ್ಟ್ರಕ್ಕೆ ಪಕ್ಷದ ಮೂಲಕ ಉತ್ತಮ ಕೊಡುಗೆ ನೀಡಿದ್ದಾರೆ. ನಿಮ್ಮ ಕಣ್ಣಿಗೆ ಕಾಣದೇ ಇರಬಹುದು. ಆದರೆ, ಹಿನ್ನೆಲೆಯಲ್ಲಿ ಇದ್ದುಕೊಂಡೇ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದು ಹೇಳಿದರು.