ಬೆಂಗಳೂರು: ರಾಜ್ಯಸಭೆ ಉಪಚುನಾವಣೆ ಸಂಬಂಧ ಅನುಮೋದಕರಿಲ್ಲದೆ ಇಬ್ಬರು ಪಕ್ಷೇತರ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತವಾಗಿದೆ.
ಇಂದು ನಾಮಪತ್ರ ಪರಿಶೀಲನೆ ಪ್ರಕ್ರಿಯೆ ನಡೆದಿದ್ದು, ಇಬ್ಬರು ಅಭ್ಯರ್ಥಿಗಳಾದ ಡಾ. ಕೆ ಪದ್ಮರಾಜ ಹಾಗೂ ಶ್ರೀವೆಂಕಟೇಶ್ವರ ಮಹಾಸ್ವಾಮಿ ಎಂಬುವರ ನಾಮಪತ್ರವನ್ನು ತಿರಸ್ಕರಿಸಲಾಗಿದ್ದರೆ, ಬಿಜೆಪಿ ಅಭ್ಯರ್ಥಿ ಕೆ ಸಿ ರಾಮಮೂರ್ತಿ ನಾಮಪತ್ರ ಸಿಂಧುವಾಗಿದೆ.
ರಾಜ್ಯಸಭೆ ಉಪಚುನಾವಣೆ ಹಿನ್ನೆಲೆ ಒಟ್ಟು ಮೂರು ಮಂದಿ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯಿಂದ ಕೆ ಸಿ ರಾಮಮೂರ್ತಿ ನಾಮಪತ್ರ ಸಲ್ಲಿಕೆ ಮಾಡಿದ್ದರೆ, ಉಳಿದಂತೆ ಸ್ವತಂತ್ರ ಅಭ್ಯರ್ಥಿ ಡಾ. ಕೆ ಪದ್ಮರಾಜನ್ ಮತ್ತು ಹಿಂದುಸ್ತಾನ್ ಜನತಾ ಪಾರ್ಟಿಯಿಂದ ಶ್ರೀವೆಂಕಟೇಶ್ವರ ಮಹಾಸ್ವಾಮಿ ಎಂಬುವರು ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾವುದೇ ರಾಜಕೀಯ ಪಕ್ಷದಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿರಲಿಲ್ಲ.
ನಾಮಪತ್ರ ಸಲ್ಲಿಸುವ ಅಭ್ಯರ್ಥಿಗಳು 10 ಮಂದಿ ಅನುಮೋದಕರ ಸಹಿ ಹಾಕುವುದು ಕಡ್ಡಾಯ. ಇಬ್ಬರು ಸ್ವತಂತ್ರ ಅಭ್ಯರ್ಥಿಗಳಿಗೆ ಯಾರೂ ಅನುಮೋದಕರು ಸಹಿ ಹಾಕಿರಲಿಲ್ಲ. ಹೀಗಾಗಿ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ. ಬಿಜೆಪಿ ಅಭ್ಯರ್ಥಿ ರಾಮಮೂರ್ತಿ ಪರ 10 ಶಾಸಕರು ಅನುಮೋದಕರಾಗಿ ಸಹಿ ಹಾಕಿದ್ದರು. ಡಿ.5ಕ್ಕೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಇದೀಗ ಇಬ್ಬರು ಪಕ್ಷೇತರ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತವಾಗಿದೆ. ಬಿಜೆಪಿ ಅಭ್ಯರ್ಥಿ ಕೆ ಸಿ ರಾಮಮೂರ್ತಿ ನಾಮಪತ್ರ ಮಾತ್ರ ಸಿಂಧುವಾಗಿದ್ದು, ಬಹುತೇಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.