ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ (ಜೆಡಿಎಸ್) ಮತಗಳನ್ನು ಅಷ್ಟು ಸುಲಭವಾಗಿ ಕಾಂಗ್ರೆಸ್ ಒಡೆಯಲು ಸಾಧ್ಯವಿಲ್ಲ. ನಿನ್ನೆ ದಿನ ಸಿದ್ದರಾಮಣ್ಣ ಅವರು ಆತ್ಮಸಾಕ್ಷಿಯ ಮತಗಳ ಬಗ್ಗೆ ಮಾತನಾಡಿದ್ದಾರೆ. ನಮ್ಮ ಪಕ್ಷದಲ್ಲಿರುವ ಶಾಸಕರಿಗೆ ಆತ್ಮಸಾಕ್ಷಿ ಇದೆ. ನಮ್ಮ ಮತಗಳನ್ನು ಅಷ್ಟು ಸುಲಭವಾಗಿ ಕಾಂಗ್ರೆಸ್ ಒಡೆಯಲು ಸಾಧ್ಯವಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಬಿಬಿಎಂಪಿ ಚುನಾವಣೆ ಹಿನ್ನೆಲೆ ಸೋಮವಾರ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ಮಹಾನಗರ ಯುವ ಜೆಡಿಎಸ್ ಮುಖಂಡರ ಸಭೆಗೂ ಮುನ್ನ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಅಸಮಾನತೆ ಎದ್ದು ಕಾಣುತ್ತಿರುವುದು ಕಾಂಗ್ರೆಸ್ನಲ್ಲಿ, ನಮ್ಮಲ್ಲಿ ಯಾವುದೇ ಅಸಮಾನತೆ ಇಲ್ಲ. ಒಬ್ಬರು, ಇಬ್ಬರು ಶಾಸಕರಲ್ಲಿ ಅಸಮಾಧಾನ ಇತ್ತು. ಅವರ ಅಸಮಾಧಾನವನ್ನು ಸರಿಪಡಿಸಿದ್ದೇವೆ. ಹೀಗಾಗಿ ಎಲ್ಲಾ ಶಾಸಕರು ಒಗ್ಗಟ್ಟಾಗಿದ್ದಾರೆ. ಎಲ್ಲರೂ ನಮ್ಮ ಪಕ್ಷದಲ್ಲಿ ಇರುತ್ತಾರೆ. ಜೂನ್ 10 ರಂದು ಅದು ಸಾಬೀತಾಗುತ್ತದೆ ಎಂದು ತಿಳಿಸಿದರು.
ಸೂಕ್ತ ವ್ಯಕ್ತಿಗಳಿಗೆ ಟಿಕೆಟ್: ಜೆಡಿಎಸ್ ಚಿಹ್ನೆ ಮೇಲೆ ಗೆದ್ದಿದ್ದೇನೆಂದು ಐದಾರು ದಿನಗಳ ಹಿಂದಷ್ಟೇ ಮಾಧ್ಯಮಗಳ ಮುಂದೆ ಮಾಜಿ ಸಚಿವ ಜಿ.ಟಿ. ದೇವೇಗೌಡ ಹೇಳಿದ್ದಾರೆ. ಹಾಗಾಗಿ ಪಕ್ಷದ ಶಾಸಕರ ಮತಗಳು ಬೇರೆ ಕಡೆ ಹೋಗುವುದಿಲ್ಲ ಎಂಬ ವಿಶ್ವಾಸವಿದೆ. ಬಿಬಿಎಂಪಿ ಹಾಗೂ ಮುಂಬರುವ ವಿಧಾನಸಭೆ ಚುನಾವಣೆಗೆ ಸೂಕ್ತ ವ್ಯಕ್ತಿಗಳಿಗೆ ಟಿಕೆಟ್ ನೀಡುತ್ತೇವೆ. ನಾಯಕರು ಚರ್ಚಿಸಿದ ಬಳಿಕ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಲಿದೆ. ಯುವ ಘಟಕ ತುಂಬಾ ಸಕ್ರಿಯವಾಗಿದ್ದು, ಪ್ರತಿಯೊಂದು ವಿಚಾರದಲ್ಲೂ ಪ್ರಚಾರ ಪಡೆಯುತ್ತಿಲ್ಲ. ಆದ್ರೆ ಯುವ ಘಟಕ ಸುಮ್ಮನೆ ಕುಳಿತಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ : ನಳಿನ್ ಕುಮಾರ್ ಕಟೀಲ್
ರಾಜ್ಯದಲ್ಲಿ ಪ್ರವಾಸ: ಪಕ್ಷ ಸಂಘಟನೆಯೇ ನನ್ನ ಮೊದಲ ಆದ್ಯತೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ, ಎಲ್ಲಾ ಜಿಲ್ಲಾ ಕೇಂದ್ರಗಳಿಗೂ ಭೇಟಿ ನೀಡುತ್ತೇನೆ. ಉತ್ತರ ಕರ್ನಾಟಕದಿಂದಲೇ ಪ್ರವಾಸ ಮಾಡುತ್ತೇನೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ರಾಮನಗರದಲ್ಲಿ ಸ್ಪರ್ಧೆ ದೂರದ ಮಾತು: ನನ್ನ ಸ್ಪರ್ಧೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ರಾಮನಗರದಲ್ಲಿ ಸ್ಪರ್ಧಿಸುವುದು ದೂರದ ಮಾತು. ನನಗೆ ಪಕ್ಷ ಜವಾಬ್ದಾರಿ ನೀಡಿದ್ದು, ಮೊದಲು ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.