ಬೆಂಗಳೂರು : ಕರ್ನಾಟಕದಲ್ಲಿ ನೂತನವಾಗಿ ರಚನೆಯಾಗಿರುವ ಟಿಟಿಡಿ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಹಾಗೂ ಉಪಾಧ್ಯಕ್ಷರಾಗಿ ಶಾಸಕ ಎಸ್.ಆರ್.ವಿಶ್ವನಾಥ ಆಯ್ಕೆಯಾಗಿದ್ದಾರೆ. ಆಂಧ್ರ ಸಿಎಂ ಜಗನ್ ಮೋಹನ ರೆಡ್ಡಿ ಆದೇಶದ ಮೇರೆಗೆ ಜಾರಿಗೆ ಬಂದಿರುವ ಈ ಆಡಳಿತ ಮಂಡಳಿಯು ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಮಿನಿ ಟಿಟಿಡಿ ದೇವಸ್ಥಾನದ ಸ್ಥಾಪನೆಗೆ ಆದ್ಯತೆ ನೀಡುವ ಉದ್ದೇಶ ಹೊಂದಿದೆ. ವೈಯಾಲಿ ಕಾವಲ್ನಲ್ಲಿರುವ ದೇವಸ್ಥಾನದಲ್ಲಿ ನಡೆಯುತ್ತಿರುವ ಆಡಳಿತ ಮಂಡಳಿ ಸಭೆಯಲ್ಲಿ ಟಿಟಿಡಿ ಆಡಳಿತ ಮಂಡಳಿ ಅಧ್ಯಕ್ಷ ಸುಬ್ಬಾರೆಡ್ಡಿ ನೂತನ ಆಡಳಿತ ಮಂಡಳಿಯ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.
ಇದೇ ವೇಳೆ ಮಾತನಾಡಿದ ಟಿಟಿಡಿ ಉಪಾಧ್ಯಕ್ಷ ಶಾಸಕ ಎಸ್.ಆರ್.ವಿಶ್ವನಾಥ್, ತಮ್ಮನ್ನು ಟಿಟಿಡಿ ಉಪಾಧ್ಯಕ್ಷರಾಗಿ ನೇಮಕ ಮಾಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು. ಭಗವಂತನ ಸೇವೆ ಮಾಡಲು ನಮಗೆ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಬಾಲಾಜಿ ಧರ್ಮ ಪ್ರಚಾರ ಮಾಡುವುದರ ಜೊತೆಗೆ ಟಿಟಿಡಿ ಅವರ ಸಹಯೋಗದೊಂದಿಗೆ ಕರ್ನಾಟಕದಲ್ಲಿ ಅವಶ್ಯಕತೆ ಇರುವ ಕಡೆ ದೇವಸ್ಥಾನ ಹಾಗೂ ಕಲ್ಯಾಣ ಮಂಟಪ ಕಟ್ಟಿಸಿ ಧರ್ಮ ಪ್ರಚಾರ ಮಾಡುತ್ತೇವೆ. ವಿಶೇಷವಾಗಿ ಮಲ್ಲೇಶ್ವರದ ಟಿಟಿಡಿ ದೇವಸ್ಥಾನದಲ್ಲಿ ಅವಶ್ಯಕತೆ ಇರುವಂತಹ ಮೂಲ ಸೌಕರ್ಯಗಳ ಕಡೆ ಗಮನ ಹರಿಸುತ್ತೇವೆ. ಅಲ್ಲದೆ, ಕರ್ನಾಟಕದಿಂದ ತಿರುಪತಿಗೆ ಸುಮಾರು 40 ರಷ್ಟು ಜನ ಹೋಗುತ್ತಾರೆ. ಅಲ್ಲಿ ನಮ್ಮ ಜನರಿಗೆ ಮೂಲ ಸೌಕರ್ಯಗಳ ಕೊರತೆಯಿದೆ. ಅಲ್ಲಿ ಕರ್ನಾಟಕ ಭವನ ನಿರ್ಮಾಣವಾಗಬೇಕು. ಈ ವಿಚಾರವಾಗಿ ನಮ್ಮ ಸರ್ಕಾರದಿಂದ ಆಂಧ್ರ ಸಿಎಂ ಜಗನ್ ಮೋಹನ ರೆಡ್ಡಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ತಿರುಪತಿಯಲ್ಲಿ ನಮಗೆ ಸೇರಿದ ಏಳು ಎಕರೆ ಜಾಗ ಇದೆ. ಕರ್ನಾಟಕದಿಂದ ಹೋಗುವಂತಹ ಭಕ್ತಾದಿಗಳಿಗೆ ಅಲ್ಲಿ ಯಾತ್ರಿ ನಿವಾಸ ಹಾಗೂ ಕಲ್ಯಾಣ ಮಂಟಪವನ್ನು ಕಟ್ಟುವುದಕ್ಕೆ ಈಗಾಗಲೇ ಪ್ಲಾನ್ ಮಾಡಿದ್ದೇವೆ. ಆಂಧ್ರ ಸರ್ಕಾರದ ಜೊತೆ ಕೈಜೋಡಿಸಿ ನಮ್ಮ ಕರ್ನಾಟಕದಿಂದ ಹೋಗುವಂತ ಭಕ್ತಾದಿಗಳಿಗೆ ಸೇವೆ ಸಲ್ಲಿಸುವ ಒಂದು ಅವಕಾಶ ಸಿಕ್ಕಿದೆ ಎಂದು ಸಂತೋಷ ಪಟ್ಟರು.