ಬೆಂಗಳೂರು: ನಾಳೆ ನಡೆಯಲಿರುವ ರಾಜ್ಯಸಭೆ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಆರು ಮಂದಿ ಅಭ್ಯರ್ಥಿಗಳು ಅಖಾಡದಲ್ಲಿದ್ದು ಮೂವರು ಅಭ್ಯರ್ಥಿಗಳು ಸುಲಭವಾಗಿ ಗೆಲುವು ಸಾಧಿಸಲಿದ್ದರೆ, ನಾಲ್ಕನೇ ಸೀಟು ಜಿದ್ದಾಜಿದ್ದಿನಿಂದ ಕೂಡಿದೆ. ಆದರೆ, ಮೂರು ಪಕ್ಷಗಳಿಗೆ ಸಿಂಧು-ಅಸಿಂಧು ಮತಗಳದ್ದೇ ಭೀತಿ ಶುರುವಾಗಿದೆ.
ಚುನಾವಣೆಯಲ್ಲಿ ಮತದಾನವನ್ನು ಕ್ರಮ ಪ್ರಕಾರವಾಗಿ ಮಾಡಬೇಕು. ಮತ ಹಾಕುವ ಸಂದರ್ಭ ಎಡವಟ್ಟು ಮಾಡಿದರೆ ಚುನಾವಣಾ ಫಲಿತಾಂಶ ಉಲ್ಟಾಪಲ್ಟಾ ಆಗುವ ಸಾಧ್ಯತೆ ಹೆಚ್ಚು. ಹಾಗಾಗಿ ಶಾಸಕರು ತಮ್ಮ ಮತವನ್ನು ಎಚ್ಚರಿಕೆಯಿಂದ ಕ್ರಮ ಪ್ರಕಾರವಾಗಿ ಹಾಕಬೇಕು. ಇಲ್ಲವಾದರೆ ಮತವನ್ನು ಅಸಿಂಧು ಎಂದು ಪರಿಗಣಿಸಲಾಗುತ್ತದೆ. ಅಸಿಂಧು ಮತಬಿದ್ದರೆ ಅಭ್ಯರ್ಥಿಯ ಗೆಲುವಿನ ಲೆಕ್ಕಾಚಾರ ತಲೆಕೆಳಗಾಗುತ್ತದೆ.
ಮತ ಚಲಾವಣೆ ಹೀಗಿರಲಿ: 1. ಮತ ನೀಡುವ ಉದ್ದೇಶಕ್ಕಾಗಿ ಅಧಿಕಾರಿ ಸರಬರಾಜು ಮಾಡಿರುವ ನೇರಳೆ ಸ್ಕೆಚ್ ಪೆನ್ನನ್ನೇ ಬಳಸಬೇಕು. ಇತರೆ ಯಾವುದೇ ಪೆನ್ನು, ಪೆನ್ಸಿಲ್, ಬಾಲ್ ಪಾಯಿಂಟ್ ಪೆನ್ನು ಇತರೆ ಯಾವುದೇ ಸಾಧನವನ್ನು ಬಳಸಬಾರದು.
2. ಪ್ರಥಮ ಪ್ರಾಶಸ್ತ್ಯವಾಗಿ ನೀವು ಆಯ್ಕೆ ಮಾಡುವ ಅಭ್ಯರ್ಥಿಯ ಹೆಸರಿನ ಎದುರು ಒದಗಿಸಿರುವ 'ಪ್ರಾಶಸ್ತ್ರ, ಕ್ರಮದ ಕಾಲಂನಲ್ಲಿ '1' ಎಂಬ ಅಂಕಿಯನ್ನು ಬರೆಯುವ ಮೂಲಕ ಮತ ನೀಡಬೇಕು. ಈ '1' ಎಂಬ ಅಂಕಿಯನ್ನು ಕೇವಲ ಒಬ್ಬ ಅಭ್ಯರ್ಥಿಯ ಹೆಸರಿನ ಮುಂದೆ ಬರೆಯಬೇಕು.
3. ಚಲಾಯಿಸಬೇಕಾದ ಅಭ್ಯರ್ಥಿಗಳ ಸಂಖ್ಯೆ ಒಂದಕ್ಕಿಂತ ಹೆಚ್ಚಾಗಿದ್ದರೂ ಕೂಡ '1' ಎಂಬ ಅಂಕಿಯನ್ನು ಕೇವಲ ಒಟ್ಟು ಅಭ್ಯರ್ಥಿಯ ಹೆಸರಿಗೆ ಮುಂದೆ ಮಾತ್ರ ಬರೆಯಬೇಕು. ಶಾಸಕರು ತಮ್ಮ ಪ್ರಾಶಸ್ತ್ಯಕ್ಕನುಸಾರವಾಗಿ ಅವರ ಇಚ್ಛೆಯ ಅಭ್ಯರ್ಥಿಗಳ ಹೆಸರಿನ ಮುಂದೆ 1 ರಿಂದ 6ರವರೆಗೆ ಪ್ರಾಶಸ್ತ್ರಗಳನ್ನು ನಮೂದಿಸಬಹುದು.
4. ಪಾಶಸ್ತ್ಯಗಳನ್ನು ಅಂಕಿಗಳಲ್ಲಿ ಅಂದರೆ, 1,2,3 ಅಂತ ಮಾತ್ರ ನಮೂದಿಸಬೇಕು ಮತ್ತು ಒಂದು, ಎರಡು, ಮೂರು ಇತ್ಯಾದಿಯಾಗಿ ಪದಗಳಲ್ಲಿ ನಮೂದಿಸಬಾರದು.
5. 1,2,3 ಅಂತ ಅಂತಾರಾಷ್ಟ್ರೀಯ ರೂಪದ ಭಾರತೀಯ ಅಂಕಿಗಳನ್ನು ಅಥವಾ I, II, III ಮುಂತಾಗಿ ರೋಮನ್ ಅಂಕಿಗಳನ್ನು ಅಥವಾ ಸಂವಿಧಾನದ ಅನುಸೂಚಿ VIII ರಲ್ಲಿ ಮನ್ನಣೆ ಪಡೆದಿರುವ ಯಾವುದೇ ಭಾರತೀಯ ಭಾಷೆಯಲ್ಲಿ ಬಳಕೆಯಲ್ಲಿರುವ ಅಂಕಿಗಳನ್ನು ನಮೂದಿಸಬಹುದು.
6. ಮತಪತ್ರದಲ್ಲಿ ಅಭ್ಯರ್ಥಿಯ ಹೆಸರನ್ನು ಬರೆಯಬಾರದು ಅಥವಾ ಯಾವುದೇ ಪದಗಳನ್ನು ಬರೆಯಬಾರದು ಅಥವಾ ಸಹಿ ಹಾಕಬಾರದು. ಹೆಬ್ಬೆಟ್ಟಿನ ಗುರುತನ್ನು ಹಾಕಬಾರದು. ಶಾಸಕರು ಪ್ರಾಶಸ್ತ್ಯವನ್ನು ಸೂಚಿಸುವಾಗ ಅವರ ಇಚ್ಛೆಯ ಅಭ್ಯರ್ಥಿಗಳ ಹೆಸರುಗಳ ಮುಂದೆ '√' ಅಥವಾ 'X' ಗುರುತನ್ನು ಹಾಕಿದರೆ ಸಾಕಾಗದು, ಅಂತಹ ಮತ ಪತ್ರವನ್ನು ತಿರಸ್ಕರಿಸಲಾಗುವುದು.
7. ರಾಜ್ಯಸಭಾ ಚುನಾವಣೆಯಲ್ಲಿ, OPEN BALLOT SYSTEM ಆಳವಡಿಸಿರುವುದರಿಂದ ರಾಜಕೀಯ ಪಕ್ಷಗಳಿಗೆ ಸೇರಿದ ಮತದಾರರು ತಮ್ಮ ಪಾಶಸ್ತ್ಯ ಮತವನ್ನು ಚಲಾಯಿಸಿದ ನಂತರ ಅಂತಹ ಮತಪತ್ರವನ್ನು ಆಯಾ ರಾಜಕೀಯ ಪಕ್ಷಗಳ ಅಧಿಕೃತ ಏಜೆಂಟ್‌ರಿಗೆ ಮಾತ್ರ ತೋರಿಸತಕ್ಕದ್ದು, ಸಂತರ ಮತಪತ್ರವನ್ನು ಮತಪೆಟ್ಟಿಗೆಯಲ್ಲಿ ಹಾಕಬೇಕು.
8. ಪಕ್ಷೇತರ ಮತದಾರರು ಯಾವುದೇ ರಾಜಕೀಯ ಪಕ್ಷಗಳಿಗೆ ಸೇರದೇ ಇರುವುದರಿಂದ, ಅವರುಗಳು ತಮ್ಮ ಪ್ರಾಶಸ್ತ್ಯ ಮತವನ್ನು ಚಲಾಯಿಸಿದ ನಂತರ ತಮ್ಮ ಮತಪತ್ರವನ್ನು ಯಾರಿಗೂ ನೇರವಾಗಿ ಮತಪೆಟ್ಟಿಗೆಯಲ್ಲಿ ಹಾಕಬಹುದು.
ಯಾವುದು ಅಸಿಂಧು ಮತಗಳಾಗುತ್ತವೆ?:
- '1' ಎಂಬ ಅಂಕಿಯನ್ನು ನಮೂದಿಸದಿರುವ ಮತ ಅಸಿಂಧು
- '1' ಎಂಬ ಅಂಕಿಯನ್ನು ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳ ಹೆಸರಿನ ಮುಂದೆ ಹಾಕಿದರೆ ಅಸಿಂಧು
- '1' ಎಂಬ ಅಂಕಿಯನ್ನು ಅದನ್ನು ಯಾವ ಅಭ್ಯರ್ಥಿಗೆ ಹಾಕಲಾಗಿದೆ ಎಂಬುದು ಸಂದೇಹಕ್ಕೆ ಆಸ್ಪದವಾಗುವಂತೆ ಹಾಕಿದರೆ ಅಸಿಂಧು
- '1' ಎಂಬ ಅಂಕಿಯನ್ನು ಮತ್ತು 2, 3 ಎಂಬ ಅಂಕಿಗಳನ್ನು ಕೂಡ ಒಂದೇ ಅಭ್ಯರ್ಥಿಯ ಹೆಸರಿನ ಮುಂದೆ ನಮೂದಿಸಿರುವ ಮತಪತ್ರ ಅಸಿಂಧು
- ಪ್ರಾಶಸ್ತ್ಯ ಮತಗಳನ್ನು ಅಂಕಿಗಳಿಗೆ ಬದಲಾಗಿ ಪದಗಳಲ್ಲಿ ನಮೂದಿಸಿದರೆ ಅಸಿಂಧು
- ಮತದಾರನನ್ನು ಗುರುತು ಹಿಡಿಯಬಹುದಾದ ರೀತಿಯಲ್ಲಿ ಯಾವುದೇ ಗುರುತು ಅಥವಾ ಬರವಣಿಗೆ ಇರುವ ಮತ ಅಸಿಂಧು
- ಚುನಾವಣಾಧಿಕಾರಿ ನೀಡಿದ ನೇರಳೆ ಸ್ಕೆಚ್ ಪೆನ್ನಿನ ಬದಲು ಬೇರೆ ಸಾಧನದಲ್ಲಿ ಗುರುತು ಮಾಡಲಾದ ಯಾವುದೇ ಅಂಕಿ ಇರುವ ಮತಪತ್ರವು ಅಸಿಂಧು.
ಇದನ್ನೂ ಓದಿ: ಮೇಕೆಗೆ ಕಚ್ಚಿದ ನಾಯಿಗಳ ಕೊಲೆಗೆ ಸುಪಾರಿ: ಡಬಲ್ ಬ್ಯಾರೆಲ್ ಗನ್‌ನಿಂದ ಗುಂಡು ಹಾರಿಸಿ ಹತ್ಯೆ!