ಬೆಂಗಳೂರು: ಕೋಲಾರ ಶಾಸಕ ಶ್ರೀನಿವಾಸ ಗೌಡರಿಗೆ ಈಗಾಗಲೇ ನಾನು ಹೇಳಿದ್ದೇನೆ. ಆ ಮನುಷ್ಯನಿಗೆ ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ರಾಜಕಾರಣ ಮಾಡಲಿ ಎಂದು ಹೆಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.ರಾಜ್ಯಸಭೆ ಚುನಾವಣೆಗೆ ಮತದಾನ ಮಾಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇದು ಕೋಲಾರ ಜನರಿಗೆ ಮಾಡಿದ ಅವಮಾನ. ಪಕ್ಷದಿಂದ ಕ್ರಮ ತೆಗೆದುಕೊಳ್ಳುವುದರಿಂದ ಏನು ಪ್ರಯೋಜನ ಇಲ್ಲ ಎಂದರು.
ದೇಶದ ಕಾನೂನಿನಲ್ಲಿ ಶಿಕ್ಷೆ ಕೊಡುವಂಥ ಯಾವುದೇ ನಿಯಮವಿಲ್ಲ. ಕಾಂಗ್ರೆಸ್ನಲ್ಲಿ ಒಡನಾಟ ಇಟ್ಟಿರುವಂಥ ಆ ವ್ಯಕ್ತಿಗೆ ನೈತಿಕತೆ ಇಲ್ಲ. ಇದು ಕೀಳು ಮಟ್ಡದ ರಾಜಕಾರಣ. ಅವತ್ತು ಕಾಂಗ್ರೆಸ್ ಎಂಟು ಶಾಸಕರಿಂದ ಕ್ರಾಸ್ ವೋಟ್ ಮಾಡಿಸಿದ್ದರು. ಇವರು ಪ್ರಜಾಪ್ರಭುತ್ವ ಉಳಿಸ್ತಾರಾ?.. ಬಿಜೆಪಿಗೂ ಇವರಿಗೂ ಏನು ವ್ಯತ್ಯಾಸ ಇದೆ? ಎಂದು ಪ್ರಶ್ನಿಸಿದರು.
ಶ್ರೀನಿವಾಸ್ ಗೌಡರ ವೋಟ್ ಹಾಕಿಸಿಕೊಂಡಿರಿ ನಿಮಗೆ ಏನು ಸಿಗ್ತು. ನಿಮ್ಮ ಅಭ್ಯರ್ಥಿ ಗೆದ್ದರೆ ಕ್ರಾಸ್ ವೋಟ್ ಮಾಡಿಸಿದ್ದಕ್ಕೆ ಸಾರ್ಥಕ ಆಯ್ತು ಎನ್ನಬಹುದು. ಆದರೆ, ಇಲ್ಲಿ ಬಿಜೆಪಿ ಗೆಲ್ಲಿಸೋದಕ್ಕೆ ಹೀಗೆ ಮಾಡಿದಿರಿ. ಗುಬ್ಬಿ ಶಾಸಕ ಜೆಡಿಎಸ್ಗೆ ಮತ ಹಾಕುತ್ತೇನೆ ಅಂದ್ರು. ಆದರೆ, ಮತಪತ್ರದಲ್ಲಿ ಏನು ಮಾಡಿದರು?.. ಅವರು ಯಾರಿಗೂ ಮತ ಹಾಕಿಲ್ಲ. ಆದರೆ ಜನರ ಮುಂದೆ ಸುಳ್ಳು ಹೇಳಿದ್ದಾರೆ. ಇಂಥ ಕೀಳು ಮಟ್ಟದ ರಾಜಕಾರಣ ಮಾಡಬಾರದು. ಬಿಜೆಪಿ ಅಭ್ಯರ್ಥಿಗಳು ಗೆದ್ದರೆ ಅದಕ್ಕೆ ನೀವು ಕಾರಣ. ಕಾಂಗ್ರೆಸ್ನ ಬಣ್ಣ ಬಯಲಾಗಿದೆ. ನನ್ನ ಜೊತೆ ಅನುಕಂಪ ಇದ್ದ ಕೆಲವು ಕೈ ಶಾಸಕರ ಜೊತೆ ಮಾತನಾಡಿದ್ದೇನೆ. ಎರಡನೇ ಪ್ರಾಶಸ್ತ್ಯ ನಮಗೆ ಹಾಕಿ ಎಂದು ಮನವಿ ಮಾಡಿದ್ದೇನೆ ಎಂದರು.
ಇಷ್ಟು ಕೀಳು ಮಟ್ಟದ ರಾಜಕಾರಣ ಮಾಡಬೇಕಾ?: ಸಿದ್ದರಾಮಯ್ಯ ಅವರು 14 ಜನರನ್ನು ಕೂರಿಸಿದ್ದಾರೆ. ಇನ್ನೂ ಮತ ಚಲಾವಣೆಗೆ ಬಂದಿಲ್ಲ. ಬಹುಶಃ ಬಿಜೆಪಿ ಗೆಲ್ಲಿಸಲು ಇನ್ನೂ ಮತ ಹಾಕಲು ಬಂದಿಲ್ಲ. ಸಂಜೆ ಅವರ ಹಣಬರಹ ಗೊತ್ತಾಗುತ್ತದೆ. ಇಷ್ಟೊಂದು ಕೀಳು ಮಟ್ಟದ ರಾಜಕಾರಣ ಮಾಡಬೇಕಾ?.. ಮಂತ್ರಿ ಮಾಡಿದ್ದೇ ದೊಡ್ಡದು. ಜೆಡಿಎಸ್ಗೆ ಮತ ಕೊಟ್ಟಿದ್ದೇನೆ ಅಂತಾರೆ. ಆದರೆ, ಮಾಡ್ತಿರೋದೇನು?.. ಕಾಂಗ್ರೆಸ್ ನಾಯಕರಿಗೆ ಯಾವ ನೈತಿಕತೆಯಿಲ್ಲ. ಬಿಜೆಪಿ ಗೆದ್ದರೆ ಕಾಂಗ್ರೆಸ್ನಿಂದ ಗೆದ್ದಂತೆ. ಜನರೇ ಮುಂದಿನ ದಿನಗಳಲ್ಲಿ ಪಾಠ ಕಲಿಸ್ತಾರೆ ಎಂದರು.
ಜನರ ಗೌರವ ಹೆಚ್ಚಿಸುವವರಿಗೆ ಮತ: ಮತದಾನದ ಬಳಿಕ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ನಾನು ಗುಪ್ತ ಮತದಾನವನ್ನು ಮಾಡಿದ್ದೇನೆ. ನಾನು ಯಾರಿಗೂ ಮತ ತೋರಿಸಿಲ್ಲ. ಮೂರು ತಲೆ ಮಾರಿನ ರಾಜಕಾರಣ ನಮ್ಮದು. ನಮ್ಮ ತಾಲೂಕಿನ ಜನರಿಗೆ ಘನತೆ ಗೌರವವನ್ನು ಸಿಗುತ್ತದೆಯೋ ಅವರಿಗೆ ಮತದಾನ ಮಾಡಿ ಬಂದಿದ್ದೇನೆ. ಅದು ಯಾರಿಗೆ ಹಾಕಿದ್ದೇನಿ ಅಂತ ನೀವು ಕಂಡುಕೊಳ್ಳಿ ಅಂತ ಪರೋಕ್ಷವಾಗಿ ಕಾಂಗ್ರೆಸ್ಗೆ ಮತದಾನ ಮಾಡಿರುವುದಾಗಿ ತಿಳಿಸಿದರು.
ಗೌರಿಶಂಕರ್ ಮತದಾನ: ತುಮಕೂರು ಗ್ರಾಮೀಣ ಜೆಡಿಎಸ್ ಶಾಸಕ ಗೌರಿ ಶಂಕರ್ ಮತದಾನ ಮಾಡಿದರು. ವಿದೇಶಿ ಪ್ರವಾಸದಲ್ಲಿದ್ದ ಗೌರಿ ಶಂಕರ್ ಮತದಾನಕ್ಕೆ ಗೈರಾಗ್ತಾರೆಂಬ ಮಾತಿತ್ತು. ಆದರೆ ನಿನ್ನೆ ರಾತ್ರಿಯೇ ಬೆಂಗಳೂರಿಗೆ ಹಿಂದಿರುಗಿರುವ ಅವರು ಇಂದು ಜೆಡಿಎಸ್ ನಾಯಕರ ಜೊತೆ ಆಗಮಿಸಿ ಮತದಾನ ಮಾಡಿದರು.
ಓದಿ: ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದೇನೆ: ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ
ಕಾಂಗ್ರೆಸ್ ಇಬ್ಬರು ಶಾಸಕರು ಬಾಕಿ: ಬಿಜೆಪಿ ಪಕ್ಷದ ಎಲ್ಲ 122 ಶಾಸಕರು ಮತದಾನ ಮಾಡಿದ್ದಾರೆ. ಜೆಡಿಎಸ್ನ ಬಹುತೇಕ ಸದಸ್ಯರು ಮತದಾನ ಮಾಡಿದ್ದಾರೆ. ಇದೀಗ ಕಾಂಗ್ರೆಸ್ನ 70 ಸದಸ್ಯರ ಪೈಕಿ 68 ಮಂದಿ ಮತದಾನ ಮಾಡಿದ್ದು, ಎಚ್ ಕೆ ಪಾಟೀಲ್ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ಆಗಮನದ ನಿರೀಕ್ಷೆಯಲ್ಲಿ ಕಾಂಗ್ರೆಸ್ ನಾಯಕರು ಇದ್ದಾರೆ. ಇಬ್ಬರು ಸದಸ್ಯರ ಮತದಾನ ಪೂರ್ಣಗೊಂಡರೆ ಕಾಂಗ್ರೆಸ್ನ ಎಲ್ಲ ಶಾಸಕರು ಮತದಾನ ಪೂರ್ಣಗೊಂಡಂತೆ ಆಗಲಿದೆ.
ಕಾಂಗ್ರೆಸ್ಗೆ ಮತ: ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಕಾಂಗ್ರೆಸ್ ಪರ ಮತ ಚಲಾಯಿಸಿದ್ದಾರೆ. ಸ್ವತಃ ಮಾಧ್ಯಮಗಳ ಮುಂದೆ ಮಾತನಾಡಿದ ಶ್ರೀನಿವಾಸ ಗೌಡ, ತಾವು ಹಿಂದೆ ಕಾಂಗ್ರೆಸ್ನಿಂದ ಸಚಿವರಾಗಿದ್ದು, ಕಾಂಗ್ರೆಸ್ ಪಕ್ಷದ ಮೇಲಿನ ಪ್ರೀತಿಗೆ ಮತದಾನ ಮಾಡಿದ್ದೇನೆ. ಇದರಿಂದ ಕುಮಾರಸ್ವಾಮಿ ಸಿಟ್ಟಾದರೆ ಆಗಲಿ ಬಿಡಿ ಎಂದಿದ್ದಾರೆ.
ಜೆಡಿಎಸ್ ಶಾಸಕರು ಅಡ್ಡ ಮತದಾನ ಮಾಡುವ ಮೂಲಕ ಕಾಂಗ್ರೆಸ್ಗೆ ಅನುಕೂಲ ಮಾಡಿಕೊಡಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದರೆ, ಇದುವರೆಗೂ ಆಗಮಿಸಿರುವ ಶಾಸಕರ ಪೈಕಿ ಕೋಲಾರ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಅಡ್ಡ ಮತದಾನ ಮಾಡಿದ್ದಾಗಿ ತಿಳಿಸಿದ್ದು, ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ತಾವು ಪಕ್ಷದ ಪರವಾಗಿಯೇ ಮತ ಹಾಕಿದ್ದಾಗಿ ಹೇಳಿದ್ದಾರೆ. ಇನ್ನು ಶಾಸಕರಾದ ಜಿಟಿ ದೇವೇಗೌಡ, ಗುಬ್ಬಿ ಶ್ರೀನಿವಾಸ್ ಸೇರಿದಂತೆ ಇತರ ಶಾಸಕರ ಮತದಾನದ ವಿವರ ತಿಳಿದು ಬರಬೇಕಿದೆ.
ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್ ಸಹ ಸದಸ್ಯತ್ವ ಸ್ವೀಕರಿಸಿದ್ದು, ಇವರ ಮತದಾನ ಕೂಡ ಯಾರಿಗೆ ಬೀಳಲಿದೆ ಎನ್ನುವ ಕುತೂಹಲ ಉಳಿದುಕೊಂಡಿದೆ. ಇವರು ಬಹುತೇಕ ಕಾಂಗ್ರೆಸ್ಗೆ ಮತ ನೀಡುವ ಸಾಧ್ಯತೆ ಇದ್ದು, ಅವರ ಆಗಮನ ಹಾಗೂ ಮತದಾನದ ನಂತರ ತಿಳಿದು ಬರಬೇಕಿದೆ.
ಮತದಾನದ ವಿವರ: ಬೆಳಗ್ಗೆ 9 ಗಂಟೆಗೆ ಮತದಾನ ಆರಂಭವಾಗಿದ್ದು, ಇದುವರೆಗೆ ಮೂರುಗಂಟೆಗಳ ಮತದಾನ ಪೂರ್ಣವಾಗಿದೆ. ಇಲ್ಲಿಯವರೆಗೂ ಬಿಜೆಪಿಯ ಎಲ್ಲಾ 122 ಮಂದಿ ಶಾಸಕರು ಕಾಂಗ್ರೆಸ್ನ 68 ಮಂದಿ ಶಾಸಕರು ಹಾಗೂ ಜೆಡಿಎಸ್ನ 09 ಮಂದಿ ಶಾಸಕರು ಮತದಾನ ಮಾಡಿದ್ದಾರೆ. ಈಗ 22 ಮಂದಿ ಶಾಸಕರು ಮತದಾನಕ್ಕೆ ತೆರಳಿದ್ದಾರೆ. ಇವರಲ್ಲಿ ಎಷ್ಟು ಮಂದಿ ಪಕ್ಷದ ಪರ ಮತ ಚಲಾಯಿಸಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಗುಬ್ಬಿ ಶ್ರೀನಿವಾಸ ಮತ ಕುತೂಹಲ ಮೂಡಿಸಿದೆ.
ಒಟ್ಟಾರೆ ಮಧ್ಯಾಹ್ನದ ಒಳಗೆ ಬಹುತೇಕ 224 ಶಾಸಕರ ಮತದಾನ ಪೂರ್ಣಗೊಳ್ಳಲಿದ್ದು ಮಧ್ಯಾಹ್ನದ ನಂತರ ಮತ ಎಣಿಕೆ ಹಾಗೂ ಅಭ್ಯರ್ಥಿಯ ಆಯ್ಕೆಯ ಘೋಷಣೆ ಮಾತ್ರ ಬಾಕಿ ಉಳಿಯುವ ಸಾಧ್ಯತೆ ಇದೆ.