ನವದೆಹಲಿ: ರಾಜ್ಯಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಅವರು ನಿನ್ನೆ ವಿರೋಧ ಪಕ್ಷದ ಸಂಸದರು ಸದನದಲ್ಲಿ ಮಾಡಿದ ಗದ್ದಲದ ಬಗ್ಗೆ ಮೌನ ಮುರಿದಿದ್ದಾರೆ. "ಕೆಲವು ಸದಸ್ಯರು ಮೇಜಿನ ಮೇಲೆ ಕುಳಿತಾಗ ಮತ್ತು ಕೆಲವರು ಮೇಜಿನ ಮೇಲೆ ಎದ್ದು ನಿಂತಾಗ ಈ ಮನೆಯ ಎಲ್ಲಾ ಪಾವಿತ್ರ್ಯತೆಯು ನಾಶವಾಯಿತು" ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯಸಭೆಯು ನಿನ್ನೆ ಅತ್ಯಂತ ಗೊಂದಲದ ಕಲಾಪಕ್ಕೆ ಸಾಕ್ಷಿಯಾಗಿತ್ತು. ಕಾಂಗ್ರೆಸ್ ಸಂಸದ ಪ್ರತಾಪ ಸಿಂಹ ಬಾಜ್ವಾ ಅವರು ಮೇಜಿನ ಮೇಲೆ ಹತ್ತಿ ನಿಯಮದ ಪುಸ್ತಕವನ್ನು ರಾಜ್ಯಸಭಾ ಕುರ್ಚಿಯ ಮೇಲೆ ಎಸೆದಿದ್ದರು.
ವಿರೋಧ ಪಕ್ಷಗಳು ಲೋಕಸಭೆ ಮತ್ತು ರಾಜ್ಯಸಭೆಗಳ ಕಲಾಪಗಳಲ್ಲಿ ಪೆಗಾಸಸ್ ಸ್ನೂಪಿಂಗ್, ಕೃಷಿ ಕಾನೂನುಗಳ ರದ್ದತಿ, ಹಣದುಬ್ಬರ ಮತ್ತು ಕೋವಿಡ್ ಬಿಕ್ಕಟ್ಟಿನ ಕುರಿತು ಚರ್ಚೆಗೆ ಒತ್ತಾಯಿಸುತ್ತಿವೆ. ಪೆಗಾಸಸ್ ವಿವಾದದ ಕುರಿತ ಮಾಧ್ಯಮ ವರದಿ ಭಾರತೀಯ ಪ್ರಜಾಪ್ರಭುತ್ವವನ್ನು ದುರುಪಯೋಗ ಪಡಿಸಿಕೊಳ್ಳುವ ಪ್ರಯತ್ನ ಎಂದು ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿಕೆಯ ನಂತರ ಸದನದ ಗೊಂದಲದ ಗೂಡಾಗಿತ್ತು.
ಈ ಹಿಂದೆ, ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಪ್ರತಿಪಕ್ಷಗಳದ್ದು ಅಸಮರ್ಪಕ ನಡವಳಿಕೆ ಎಂದು ಟೀಕಿಸಿದ್ದರು.
ಇದನ್ನೂ ಓದಿ: ಪೆಗಾಸಸ್ ಗದ್ದಲಕ್ಕೆ ಲೋಕಸಭೆ ಕಲಾಪ ಬಲಿ; ಅನಿರ್ದಿಷ್ಟಾವಧಿಗೆ ಮುಂದೂಡಿಕೆ