ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರ ಹೈಕಮಾಂಡ್ ಜತೆ ಚರ್ಚಿಸಿ ಸಂಜೆ ವಿವರಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸದಾಶಿವ ನಗರದ ನಿವಾಸದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿಯಿಂದ ತೆರವಾಗಿರುವ 1 ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಅಭ್ಯರ್ಥಿ ಕಣಕ್ಕಿಳಿಸೋದಾ ಬೇಡ್ವಾ ಅನ್ನೋದು ನೋಡಬೇಕಾಗುತ್ತೆ. ನಮ್ ಬಳಿ ನಂಬರ್ ಇಲ್ಲ. ಎಲ್ಲವನ್ನೂ ನೋಡಬೇಕು. ಇದರಿಂದ ಪಕ್ಷದ ವರಿಷ್ಠರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದಿದ್ದಾರೆ.
ಜೆಡಿಎಸ್ ಮತ್ತು ಬಿಜೆಪಿ ದಿನೇ ದಿನೆ ದೋಸ್ತಿ ಬಲಪಡಿಸಿಕೊಳ್ಳುತ್ತಿವೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಇದರ ಬಗ್ಗೆ ಈಗ ಏನೂ ಮಾತನಾಡಲ್ಲ. ಮುಂದಿನ ಫಲಿತಾಂಶ, ರಾಜಕೀಯ ಬೆಳವಣಿಗೆ ನೋಡಿ ಮಾತಾಡುತ್ತೇನೆ. ಕಾಂಗ್ರೆಸ್ ಪಾರ್ಟಿಗೆ ಸಹಕಾರ ಕ್ಷೇತ್ರದಲ್ಲಿ ಅಧಿಕಾರ ತಪ್ಪಿಸಲು ಏನೇನು ಮಾಡ್ತಾ ಇದ್ದಾರೆ ಎಂದರು.
ಮರಾಠ ಪ್ರಾಧಿಕಾರ ರಚನೆ ವಿಚಾರ ಮಾತನಾಡಿ, ನಮ್ಮ ರಾಜ್ಯದಲ್ಲಿರುವ ಜನರಿಗೆ ಕೊಡಬಾರದು ಅಂತೇನಿಲ್ಲ. ಆದರೆ ಅವರನ್ನು ಯಾಕೆ ಪ್ರತ್ಯೇಕವಾಗಿ ನೋಡ್ತಿರಾ? ಮೊದಲು ನಾವು ಅವರಿಗೆ ಸಹಾಯ ಮಾಡಿಲ್ವಾ? ಯಾಕೆ ಸಮಾಜ ಒಡೆಯೋ ಕೆಲಸ ಮಾಡಬೇಕು? ಎಂದು ಹೇಳಿದರು.
ಉಪ ಚುನಾವಣೆ ವಿಚಾರ ಮಾತನಾಡಿ, ಲೋಕಸಭಾ ಉಪ ಚುನಾವಣೆ ಎಂ.ಬಿ.ಪಾಟೀಲ್ ಹಾಗೂ ಬಸವಕಲ್ಯಾಣ, ಮಸ್ಕಿ ವಿಧಾನಸಭೆ ಉಪ ಚುನಾವಣೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ ಹಾಗೂ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಸಮಿತಿ ರಚನೆ ಆಗಿದೆ. ನಾನೂ ಹೋಗ್ತಿನಿ. ಸಮಿತಿ ವರದಿ ಬಂದ ಮೇಲೆ ನೋಡೋಣ ಎಂದರು.
ಉಪ ಚುನಾವಣೆಯಿಂದ ಜೆಡಿಎಸ್ ದೂರ ಆಗುವ ವಿಚಾರ ಅಧಿಕೃತವಾಗಿ ಘೋಷಣೆ ಆಗೋ ಮೊದಲು ನಾನು ಏನು ಮಾತನಾಡೋದಿಲ್ಲ. ಆ ಪಕ್ಷಕ್ಕೆ ಏನೋ ಲಾಭ ಇರುತ್ತೆ. ನಾನು ಯಾಕೆ ಮಾತನಾಡಲಿ ಎಂದರು.
ಸಾರಿಗೆ ನೌಕರರಿಗೆ ಸಂಬಳ ವಿಚಾರ ಮಾತನಾಡಿ, ಸುರೇಶ್ ಕುಮಾರ್ ಸಾಹೇಬ್ರು ಶಿಕ್ಷಕರಿಗೆ ಸಂಬಳ ಕೊಡಿ ಅಂತಿದ್ದಾರೆ. ಶಾಲಾ ಫೀಸ್ ತಗೋಬೇಡಿ ಅಂತಿದ್ದಾರೆ. ಇತ್ತ ಸಾರಿಗೆ ಇಲಾಖೆಗೂ ಸಂಬಳ ಆಗಿಲ್ಲ. ಸರ್ಕಾರ ಸಾರಿಗೆ ನೌಕರರಿಗೆ ಸಂಬಳ ಕೊಡಬೇಕು. ಬೇರೆ ಯಾವುದೋ ಕೆಲಸ ನಿಲ್ಲಿಸಿದ್ರೆ ಏನಾಗುತ್ತೆ? ಕೇಂದ್ರ ಸರ್ಕಾರದಿಂದ ಪರಿಹಾರ ಪಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ಹೋಗಲಿ ನಮ್ಮನ್ನು ಕರ್ಕೊಂಡು ಹೋದ್ರೆ ನಾವಾದ್ರು ಮಾತನಾಡುತ್ತೇವೆ. ಅದನ್ನೇ ನಾವು, ಸಿದ್ದರಾಮಯ್ಯ ಹೇಳಿದ್ದೇವೆ. ಎಲ್ಲಾ ರಾಜ್ಯಕ್ಕೆ ಅನುದಾನ ನೀಡ್ತಾ ಇದಾರೆ. ಪಶ್ಚಿಮ ಬಂಗಾಳಕ್ಕೆ ಹಣ ನೀಡ್ತಾ ಇದಾರೆ. ನಮ್ಮ ರಾಜ್ಯದ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.