ಬೆಂಗಳೂರು: ರಾಜ್ಯಸಭೆ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಇತ್ತ ಕಾಂಗ್ರೆಸ್ ನಾಯಕರು ಕೈ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಅಂತಿಮ ತೀರ್ಮಾಣ ಕೈಗೊಳ್ಳದೇ ಗೊಂದಲಕ್ಕೀಡಾಗಿದ್ದಾರೆ.
ಈಗಾಗಲೇ ರಾಜ್ಯಸಭೆ ಉಪಕದನಕ್ಕೆ ಬಿಜೆಪಿ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಆದರೆ ಇತ್ತ ರಾಜ್ಯ ಕಾಂಗ್ರೆಸ್ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೇ ಆಥವಾ ಬೇಡವೇ ಎಂಬುದರ ಬಗ್ಗೆ ಇನ್ನೂ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಈ ಬಗ್ಗೆ ಸಭೆ ಸೇರಿ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆಸುವ ಹಂತದಲ್ಲಿದ್ದಾರೆ.
ಉಪ ಚುನಾವಣೆಯ ರಿಸಲ್ಟ್ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಸದ್ಯಕ್ಕೆ ಕಾಂಗ್ರೆಸ್ಗೆ ಸಂಖ್ಯಾಬಲದ ಕೊರತೆ ಇದೆ. ಉಪಚುನಾವಣೆ ಫಲಿತಾಂಶದ ಬಳಿಕ ಬಲಾಬಲದ ಸ್ಪಷ್ಟ ಚಿತ್ರಣ ಸಿಗಲಿದೆ. ಹೀಗಾಗಿ ಕಾಂಗ್ರೆಸ್ ನಾಯಕರು ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿಲ್ಲ.
ಡಿಸೆಂಬರ್ 2ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಡಿಸೆಂಬರ್ 5 ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಇತ್ತ ಡಿ.5 ರಂದು ವಿಧಾನಸಭೆ 15 ಕ್ಷೇತ್ರಗಳ ಉಪ ಚುನಾವಣೆ ಮತದಾನ ನಡೆಯಲಿದೆ. ಡಿಸೆಂಬರ್ 9 ರಂದು ಉಪ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ. ಅದರ ಆಧಾರದಲ್ಲಿ ಕಾಂಗ್ರೆಸ್ಗೆ ತನ್ನ ಸಂಖ್ಯಾಬಲದ ಸ್ಪಷ್ಟ ಲೆಕ್ಕಾಚಾರ ಸಿಗಲಿದೆ. ಹೀಗಾಗಿ ಏನು ಮಾಡುವುದು ಎಂಬ ಗೊಂದಲದಲ್ಲಿದೆ.
ಡಿಸೆಂಬರ್ 12ಕ್ಕೆ ರಾಜ್ಯಸಭಾದ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ. ಸದ್ಯ ಬಿಜೆಪಿ 105 ಸದಸ್ಯ ಬಲ ಹೊಂದಿದ್ದರೆ, ಕಾಂಗ್ರೆಸ್ 66 ಹಾಗೂ ಜೆಡಿಎಸ್ 34 ಶಾಸಕರನ್ನು ಹೊಂದಿದೆ. ಇನ್ನು ಪಕ್ಷೇತರ 1, ಬಿಎಸ್ಪಿಯಿಂದ ಉಚ್ಚಾಟಿತ ಸದಸ್ಯ 1, ನಾಮನಿರ್ದೇಶಿತ ಒಬ್ಬ ಸದಸ್ಯರಿದ್ದಾರೆ.
ಈವರೆಗೆ 3 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ: ರಾಜ್ಯಸಭಾ ಉಪಚುನಾವಣೆ ಇದುವರೆಗೆ 3 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿದೆ.
ತಮಿಳುನಾಡಿನ ಸೇಲಂ ಜಿಲ್ಲೆಯ ಮೆಟ್ಟೂರು ತಾಲೂಕಿನ ಹಾಗೂ ಮೆಟ್ಟೂರು ಪಟ್ಟಣದ ನಿವಾಸಿ ಡಾ.ಕೆ.ಪದ್ಮರಾಜನ್ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ. ವಿಜಯಪುರ ಜಿಲ್ಲೆ, ಚಡಚಣ ತಾಲೂಕಿನ ಬರಡೋಲ ಗ್ರಾಮದ ಶ್ರೀವೆಂಕಟೇಶ್ವರ ಮಹಾ ಸ್ವಾಮೀಜಿ ಉರ್ಫ್ ದೀಪಕ್ ಎಂಬುವವರು ಬಿಜೆಪಿ ಅಭ್ಯರ್ಥಿ ಎಂದು ನಾಮಪತ್ರ ಸಲ್ಲಿಸಿದ್ದಾರೆ.
ಮಾಜಿ ರಾಜ್ಯಸಭಾ ಸದಸ್ಯ, ಕೆ.ಸಿ.ರಾಮಮೂರ್ತಿ ಇಂದು ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿ ಅಭ್ಯರ್ಥಿಗೆ 5ಕ್ಕೂ ಹೆಚ್ಚು ಶಾಸಕರು ಅನುಮೋದಕರಾಗಿ ಸಹಿ ಮಾಡಿದ್ದಾರೆ. ಆದರೆ ಉಳಿದ ಇತರ ಇಬ್ಬರು ಅಭ್ಯರ್ಥಿಗಳಿಗೆ ಯಾರೂ ಅನುಮೋದಕರಾಗಿ ಸಹಿ ಮಾಡಿಲ್ಲ. ನಾಮಪತ್ರ ಪರಿಶೀಲನೆ ವೇಳೆ ಈ ನಾಮಪತ್ರಗಳು ವಜಾಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.