ಬೆಂಗಳೂರು: ಕಾಂಗ್ರೆಸ್ನವರೇ ನಮ್ಮ ಪಕ್ಷಕ್ಕೆ ಬರುತ್ತೇವೆಂದು ಹೇಳುತ್ತಿದ್ದಾರೆ. ಇದ್ದೋರಿಗೇ ಅವಕಾಶ ಸಿಗುತ್ತಿಲ್ಲ, ಅದಕ್ಕೆ ನಾವೇ ಬೇಡ ಅಂತಿದ್ದೇವೆ ಎಂದು ಸುರಪುರ ಶಾಸಕ ರಾಜುಗೌಡ ಹೇಳಿದ್ದಾರೆ.
‘ಸಿದ್ದರಾಮಯ್ಯರನ್ನು ಬಿಜೆಪಿಗೆ ಕರೆತರುವೆ’
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಯಾರೂ ಕಾಂಗ್ರೆಸ್ಗೆ ಹೋಗಲ್ಲ. ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ನಾನೇ ಸಿದ್ದರಾಮಯ್ಯ ಅವರನ್ನು ಬಿಜೆಪಿಗೆ ಕರೆತರುವುದಕ್ಕೆ ಪ್ರಯತ್ನ ಮಾಡುತ್ತೇನೆ. ಅದರಲ್ಲಿ ಯಶಸ್ವಿ ಆಗುತ್ತೇನೆ ಎನ್ನುವ ವಿಶ್ವಾಸವಿದೆ ಎಂದರು.
‘ಕೆಲಸ ಮಾಡಿ ಅಂತಾ ಹೇಳಿದ್ದಾರಷ್ಟೇ’
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಪ್ರತಿಪಕ್ಷದವರನ್ನು ನಿರ್ಲಕ್ಷ್ಯ ಮಾಡಬೇಡಿ. ಎದುರಾಳಿ ಯಾರೇ ಇದ್ದರೂ ಮೈಮರೆಯಬೇಡಿ ಎಂದು ಸಲಹೆ ನೀಡಿದ್ದಾರೆ ಎಂದರು. ಇದೇ ವೇಳೆ ನರೇಂದ್ರ ಮೋದಿಯವರ ಹೆಸರಲ್ಲಿ ಚುನಾವಣೆ ಗೆಲ್ಲುವುದಕ್ಕಿಂತ ನಮ್ಮ ಸಾಮರ್ಥ್ಯದಿಂದಲೇ ಜಯ ಸಾಧಿಸೋಣ ಎಂಬ ಬಿಎಸ್ವೈ ಕರೆ ಕುರಿತು ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಆ ರೀತಿ ಹೇಳಿಲ್ಲ. ಮೋದಿ ಹೆಸರು ಅಂತಾನೇ ಇರಬೇಡಿ. ನೀವು ಕೆಲಸ ಮಾಡಿ ಅಂತಾ ಹೇಳಿದ್ದಾರಷ್ಟೇ ಎಂದು ಸಮಜಾಯಿಷಿ ನೀಡಿದರು.
‘ನಾನು ಮೂಲ ಬಿಜೆಪಿಗ’
ಬಳಿಕ ಮಾತನಾಡಿದ ಶಾಸಕ ಎಂ.ಪಿ. ಕುಮಾರಸ್ವಾಮಿ ನಾನು ಕಾಂಗ್ರೆಸ್ಗೆ ಹೋಗಲ್ಲ, ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ನಮ್ಮ ಪಕ್ಷದಲ್ಲಿ ನಮಗಾಗದವರೇ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದರು.
ನನ್ನನ್ನು ಡಿ.ಕೆ. ಶಿವಕುಮಾರ್ ಸಂಪರ್ಕಿಸಿಲ್ಲ. ನನಗೆ ಬಿಜೆಪಿಯಲ್ಲಿ ಯಾವುದೇ ಬೇಜಾರಿಲ್ಲ. ನಾನು ಮೂಲ ಬಿಜೆಪಿಗ. ಪದೇ ಪದೇ ನಮ್ಮ ಹೆಸರನ್ನು ಯಾಕೆ ತರುತ್ತಿದ್ದಾರೋ ಗೊತ್ತಿಲ್ಲ. ಕಾಂಗ್ರೆಸ್ಗೆ ಹೋಗುವ ಅನಿವಾರ್ಯತೆ ಇಲ್ಲ. ಬಿಜೆಪಿ ನನ್ನನ್ನು ಗೌರವದಿಂದ ನಡೆಸಿಕೊಂಡಿದೆ ಎಂದು ಶಾಸಕ ರಾಜುಗೌಡ ಸ್ಪಷ್ಟಪಡಿಸಿದರು.