ಬೆಂಗಳೂರು: ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾಗಿ ಶಾಸಕ ನರಸಿಂಹ ನಾಯಕ್ (ರಾಜುಗೌಡ) ಇಂದು ಅಧಿಕಾರ ಸ್ವೀಕಾರ ಮಾಡಿದರು.
ಶೇಷಾದ್ರಿಪುರಂನಲ್ಲಿರುವ ಮಂಡಳಿಯ ಕಚೇರಿಯಲ್ಲಿ ಸರಳವಾಗಿ ಪೂಜಾ ಕೈಂಕರ್ಯ ನೆರವೇರಿಸಿದ ರಾಜುಗೌಡ, ಕಂದಾಯ ಸಚಿವ ಆರ್.ಅಶೋಕ್,ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಸಿಎಂ ರಾಜಕೀಯ ಕಾರ್ಯದರ್ಶಿಗಳಾದ ಎಂ.ಪಿ ರೇಣುಕಾಚಾರ್ಯ, ಎಸ್.ಆರ್.ವಿಶ್ವನಾಥ್ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು. ನೂತನ ಅಧ್ಯಕ್ಷರಿಗೆ ಸಚಿವರು, ಮುಖಂಡರು ಶುಭ ಕೋರಿದರು.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯ ಸಚಿವರಾಗಿದ್ದ ರಾಜುಗೌಡ, ಈ ಬಾರಿಯೂ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಸಂಪುಟ ವಿಸ್ತರಣೆ ವೇಳೆ ರೆಬಲ್ ಆಗಿದ್ದು ಶಾಸಕರ ಭವನದಲ್ಲಿ ನಡೆದ ರೆಬಲ್ ಶಾಸಕರ ಸಭೆಯಲ್ಲಿಯೂ ಪಾಲ್ಗೊಂಡಿದ್ದರು. ನನಗೆ ಅವಕಾಶ ಸಿಗದೇ ಇದ್ದರೂ ಪರ್ವಾಗಿಲ್ಲ, ನಮ್ಮ ಭಾಗಕ್ಕೆ ಅವಕಾಶ ನೀಡಿ ಉಮೇಶ್ ಕತ್ತಿಯವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಿ ಎನ್ನುವ ಬೇಡಿಕೆಯನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರು. ಇದೀಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿಗಮ ಮಂಡಳಿಗಳಿಗೆ ಶಾಸಕರನ್ನು ನೇಮಿಸಿದ್ದು ಅದರಲ್ಲಿ ರಾಜುಗೌಡ ಅವರಿಗೂ ಸ್ಥಾನ ನೀಡಿದ್ದಾರೆ. ಆರಂಭದಲ್ಲಿ ನಿಗಮ ಮಂಡಳಿ ಸ್ಥಾನ ಪಡೆಯಲು ಹಿಂದೇಟು ಹಾಕಿದ್ದರಾದರೂ ಕಡೆಗೂ ಇಂದು ಅಧಿಕಾರ ಸ್ವೀಕಾರ ಮಾಡಿದ್ದಾರೆ.