ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ವಿಮೆ ಮಾಡಿಸಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಮುಂದಾಗಿದೆ.
ವಿಶ್ವವಿದ್ಯಾಲಯದಲ್ಲಿ 10 ಬಗೆಯ ಕೋರ್ಸ್ಗಳಿದ್ದು, ಸುಮಾರು 60 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ಸದ್ಯ ಸುಮಾರು 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಷ್ಟು ದೊಡ್ಡ ವಿದ್ಯಾರ್ಥಿ ಸಮೂಹ ಹೊಂದಿರುವ ವಿಶ್ವವಿದ್ಯಾಲಯವು ತನ್ನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇನ್ಸುರೆನ್ಸ್ ಮಾಡಿಸುವ ಆಲೋಚನೆಯನ್ನು ಹೊಂದಿದೆ.
ಆರೋಗ್ಯದ ದೃಷ್ಟಿಯಿಂದ ಹಾಗೂ ಅಪಘಾತವಾದ ಸಂದರ್ಭದಲ್ಲಿ ಇದು ಸಹಾಯವಾಗಲಿದೆ. ಇನ್ನು ಕೆಲವೊಮ್ಮೆ ಓದುವ ಸಮಯದಲ್ಲಿ ಮನೆಯಲ್ಲಿ ಪಾಲಕ-ಪೋಷಕರು ಮರಣ ಹೊಂದಿದಾಗ, ಹಣಕಾಸಿನ ಸಮಸ್ಯೆ ಉಂಟಾಗಿ ವಿದ್ಯಾಭಾಸ ಅರ್ಧಕ್ಕೆ ನಿಲ್ಲುವ ಸನ್ನಿವೇಶವೂ ಉದ್ಭವಿಸುತ್ತದೆ. ಹೀಗಾಗಿ ಅವರಿಗೆ ಯಾವುದೇ ಕಷ್ಟವಾಗದೇ ಕೋರ್ಸುಗಳನ್ನ ಮುಗಿಸಿಕೊಂಡು ಹೋಗುವ ರೀತಿಯಲ್ಲೂ ಒಂದು ವ್ಯವಸ್ಥೆ ಕಲ್ಪಿಸಲು ವಿವಿ ಮುಂದಾಗಿದೆ.
ಈಗಾಗಲೇ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿವಿಯು ಹಲವು ಇನ್ಸುರೆನ್ಸ್ ಕಂಪನಿಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಒಂದೊಳ್ಳೆ ಸೇವೆ ನೀಡಲು ಚಿಂತನೆ ನಡೆಸಿದೆ. ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ಆದರೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಆರೋಗ್ಯ ವಿಮೆ ಕಲ್ಪಿಸಿದ ದೇಶದ ಮೊದಲ ವಿವಿ ಎಂಬ ಹೆಗ್ಗಳಿಕೆ ಬರಲಿದೆ.