ಬೆಂಗಳೂರು: ಸಾಹಿತ್ಯ ಲೋಕದ ಪ್ರೀತಿಯ ಲೇಖಕಿ ರಾಜೇಶ್ವರಿ ತೇಜಸ್ವಿ ಅವರು ಇಂದು ಅಗಲಿದ್ದಾರೆ. ದೇಹವನ್ನು ಕುಟುಂಬಸ್ಥರು ಬೌರಿಂಗ್ ಆಸ್ಪತ್ರೆಗೆ ದಾನ ಮಾಡಿದ್ದಾರೆ. ಚಿಕ್ಕಂದಿನಿಂದಲೂ, ರಕ್ತ ದಾನ, ಕಣ್ಣಿನ ದಾನ, ದೇಹ ದಾನದ ಬಗ್ಗೆ ಆಸೆ ಇತ್ತು. ಆ ಪ್ರಕಾರ ದೇಹದಾನ ಮಾಡಿದ್ದೇವೆ ಎಂದು ಹಿರಿಯ ಮಗಳು ಸುಶ್ಮಿತಾ ತಿಳಿಸಿದ್ದಾರೆ.
ರಾಜೇಶ್ವರಿ ತೇಜಸ್ವಿ ಅವರು ಮೂಡಿಗೆರೆಯ ನಿರುತ್ತರದಲ್ಲಿದ್ದು ತೇಜಸ್ವಿಯಂತೆ ಕೃಷಿ ಕಾಯಕ ನಡೆಸುತ್ತಿದ್ದರು. ಎಲ್ಲರೂ ರಾಜೇಶ್ವರಿ ಮೇಡಂ ಆರಾಮಾಗೆ ಇದ್ದಾರೆ ಅಂತ ಭಾವಿಸಿದ್ದರು. ಆದರೆ, ಅಪಾರ ಸಾಹಿತ್ಯ ಪ್ರೇಮಿಗಳಿಗೆ ತೇಜಸ್ವಿ ಪಾಲಿನ ರಾಜೇಶ್ವರಿ ಹಠಾತ್ ಸಾವು ಸಾಹಿತ್ಯ ಪ್ರೇಮಿಗಳಿಗೆ ನೋವು ತಂದಿದೆ.
ತೇಜಸ್ವಿ ಸಾವಿನ ಬಳಿಕವೂ ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿದ್ದು ತೋಟ ನೋಡಿಕೊಳ್ಳುತ್ತಾ, ಕೃಷಿಯನ್ನ ರಾಜೇಶ್ವರಿ ಅವರು ಮುಂದುವರಿಸಿದ್ದರು. ಮೂಡಿಗೆರೆ ತೋಟದ ಮನೆ ನಿರುತ್ತರಕ್ಕೆ ಬಂದ ತೇಜಸ್ವಿ ಅಭಿಮಾನಿಗಳನ್ನ ಪ್ರೀತಿಯಿಂದ ನಗುತ್ತಲೇ ಮಾತಾಡಿಸುತ್ತಾ ತೇಜಸ್ವಿ ನೆನಪನ್ನು ಬಿಚ್ಚಿಡುತ್ತಿದ್ದರು.
ರಾಜೇಶ್ವರಿ ಅವರಿಗೆ ಕಾಡಿತ್ತು ತೀವ್ರ ಜ್ವರ
ಆದರೆ, ಕಳೆದ ಕೆಲವು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ರಾಜೇಶ್ವರಿ ಅವರಿಗೆ ದೇಹದಲ್ಲಿ ಬಿಳಿ ರಕ್ತದ ಕಣಗಳು ಕಡಿಮೆಯಾಗಿದ್ದವು. ಮೂರ್ನಾಲ್ಕು ದಿನದಿಂದ ಚಿಕಿತ್ಸೆಯಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.
ಮಂತ್ರ ಮಾಂಗಲ್ಯಕ್ಕೆ ಒಳಗಾದ ಮೊದಲ ಜೋಡಿ
ರಾಜೇಶ್ವರಿ ಅವರು ಪೂರ್ಣಚಂದ್ರ ತೇಜಸ್ವಿಯವರ ಪರಿಚಯವಾಗಿ ಪ್ರೀತಿಸಿ ಮಂತ್ರ ಮಾಂಗಲ್ಯ ಮಾದರಿಯಲ್ಲಿ ಮದುವೆಯಾದ ಮೊದಲಿಗರು. ಬಳಿಕ ಪತಿ ಜೊತೆ ಸೇರಿ ಪುಸ್ತಕ ಪ್ರೇಮ ಬೆಳೆಸಿಕೊಂಡು, ಕೆಲ ಪುಸ್ತಕಗಳನ್ನ ಬರೆದಿದ್ದರು. ‘ನನ್ನ ತೇಜಸ್ವಿ’ ರಾಜೇಶ್ವರಿ ಅವರ ಮೊದಲ ಪುಸ್ತಕ. ಈಗ ಆ ಪುಸ್ತಕ ಐದನೇ ಮುದ್ರಣ ಕಂಡಿದೆ. ‘ನಮ್ಮ ಮನೆಗೂ ಬಂದರು ಗಾಂಧೀಜಿ’ ರಾಜೇಶ್ವರಿ ಅವರ ಎರಡನೇಯ ಪುಸ್ತಕ.
ಪುಸ್ತಕ ಪ್ರೇಮದ ಜೊತೆ ಇವರ ಹವ್ಯಾಸವೂ ವಿಭಿನ್ನವಾಗಿದೆ. ಟೈಲರಿಂಗ್, ಮೊಮ್ಮಕ್ಕಳು ಮತ್ತು ನೆರೆಹೊರೆಯ ಮಕ್ಕಳಿಗೆ ಸ್ಟ್ಯಾಂಪ್ ಕಲೆಕ್ಟ್ ಮಾಡಲು ಪ್ರೇರೇಪಿಸುತ್ತಿದ್ದರು. ರಾಜೇಶ್ವರಿ ತೇಜಸ್ವಿಯವರು ಅಪರೂಪದ ಹವ್ಯಾಸಗಳೊಂದಿಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹ್ಯಾಂಡ್ ಪೋಸ್ಟ್ ಸಮೀಪದ ಕಾಫಿ ತೋಟದ ಮನೆಯಲ್ಲಿ ವಾಸವಿದ್ದರು. ಇಂದು ಅವರು ಇಹಲೋಕ ತ್ಯಜಿಸಿರೋದು ಲಕ್ಷಾಂತರ ಅಭಿಮಾನಿಗಳಿಗೆ ನೋವು ತಂದಿದೆ ಎಂದರು ಚಿತ್ರ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ಇದನ್ನೂ ಓದಿ : ದಿ. ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ವಿಧಿವಶ...
ಆಸ್ಪತ್ರೆಯಿಂದ ನೇರವಾಗಿ ಮಗಳು ಸುಸ್ಮಿತಾಳ ಮನೆಗೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಬಂದು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಇಲ್ಲಿ ತೇಜಸ್ವಿ ಹಾಗೂ ರಾಜೇಶ್ವರಿ ಅಭಿಮಾನಿಗಳು ಬಂದು ಅಂತಿಮ ದರ್ಶನ ಪಡೆದರು. ಹಾಗೇ ಮೊದಲಿನಿಂದಲೇ ರಕ್ತದಾನ ಅಂದರೇ ರಾಜೇಶ್ವರಿ ಅವರಿಗೆ ಬಹಳ ಪ್ರೀತಿ. ಬದುಕಿದ್ದಾಗಲೇ ನೇತ್ರದಾನ ಮತ್ತು ದೇಹದಾನ ಮಾಡಬೇಕು ಅಂತ ಮಕ್ಕಳಲ್ಲಿ ಹೇಳಿದ್ದರು. ಹೀಗಾಗಿ ಬೌರಿಂಗ್ ಆಸ್ಪತ್ರೆಗೆ ದೇಹವನ್ನು ನೀಡಲಾಗಿದೆ. ಅಲ್ಲಿ ದೇಹವನ್ನು ವೈದ್ಯಕೀಯ ಉದ್ದೇಶಗಳಿಗೆ ಬಳಸಲಾಗುತ್ತದೆ ಅಂತ ಹಿರಿಯ ಮಗಳು ಸುಶ್ಮಿತಾ ತಿಳಿಸಿದ್ದಾರೆ.