ಬೆಂಗಳೂರು : ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ರಾಜೇಶ್ ಕುಂತೂರು ಬಿಜೆಪಿ ಕಚೇರಿಗೆ ಭೇಟಿ ನೀಡಿ ಅಧಿಕೃತವಾಗಿ ಕರ್ತವ್ಯ ಆರಂಭಿಸಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ಸಂಘಟನೆಗೆ ಸರ್ಜರಿ ಮಾಡಿದ್ದ ಸಂಘ, ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೇಶ್ ಕುಂತೂರ್ ಹೆಸರು ಶಿಫಾರಸು ಮಾಡಿದ್ದು, ಈ ಬಗ್ಗೆ ಇಂದು ಬೆಳಗ್ಗೆ ಬಿಜೆಪಿ ಹೈಕಮಾಂಡ್ ನೇಮಕ ಆದೇಶ ಹೊರಡಿಸಿದೆ. ಆದೇಶ ಹೊರ ಬೀಳುತ್ತಿದ್ದಂತೆ ಮಲ್ಲೇಶ್ವರಂ ನಲ್ಲಿರುವ ಪಕ್ಷದ ಕಚೇರಿ ಜಗನ್ನಾಥ ಭವನಕ್ಕೆ ರಾಜೇಶ್ ಕುಂತೂರು ಆಗಮಿಸಿದರು.
ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಮತ್ತು ಕಚೇರಿ ಕಾರ್ಯದರ್ಶಿ ಲೋಕೇಶ್ ಅಂಬೇಕಲ್ಲು ನೂತನ ಸಂಘಟನಾ ಪ್ರಧಾನ ಕಾರ್ಯದರ್ಶಿ ಅವರನ್ನು ಪಕ್ಷದ ಕಚೇರಿಗೆ ಸ್ವಾಗತಿಸಿದರು.
ಸಂಘ ಮತ್ತು ಪಕ್ಷದ ನಡುವೆ ಸಮನ್ವಯತೆ ಮೂಡಿಸಿಕೊಂಡು ಹೋಗುವ ಮಹತ್ವದ ಜವಾಬ್ದಾರಿ ನಿರ್ವಹಿಸುವ ಹೊಣೆಗಾರಿಕೆ ಇದೀಗ ರಾಜೇಶ್ ಹೆಗಲಿಗೇರಿದೆ. ಕಳೆದ ಆರು ವರ್ಷಗಳಿಂದ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದ ಅರುಣ್ ಕುಮಾರ್ ಅವರನ್ನು ಸಂಘಕ್ಕೆ ಮರಳಿ ವಾಪಸ್ ಕರೆಸಿಕೊಳ್ಳಲಾಗಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಮತ್ತು ಉತ್ತರ ಪ್ರಾಂತದ ಪ್ರಚಾರ ಪ್ರಮುಖರಾಗಿ ನಿಯುಕ್ತಿಗೊಳಿಸಲಾಗಿದೆ.
ಹೊಸ ಜವಾಬ್ದಾರಿ ಹಂಚಿಕೆಯಾಗುತ್ತಿದ್ದಂತೆ ಅರುಣ್ ಕುಮಾರ್ ಅವರು ತಮ್ಮ ವಸ್ತುಗಳನ್ನು ತೆಗೆದುಕೊಂಡು ಜಗನ್ನಾಥ ಭವನ ಖಾಲಿ ಮಾಡಿ ತಮಗೆ ವಹಿಸಿರುವ ಹೊಸ ಜವಾಬ್ದಾರಿಯ ಸ್ಥಾನಕ್ಕೆ ತೆರಳಿದ್ದಾರೆ.
ಓದಿ : ಪ್ರತಿಭಟನೆ ಮೂಲಕ ದೇಶದ ಜನರ ದಿಕ್ಕು ತಪ್ಪಿಸುವ ಕಾಂಗ್ರೆಸ್: ಮಹೇಶ್ ಟೆಂಗಿನಕಾಯಿ