ಬೆಂಗಳೂರು: ನೆಲಮಂಗಲದ ವಕೀಲ ಕೇಶವಮೂರ್ತಿ ಅವರ ಮಗ ವಕೀಲ ಅಮಿತ್ ಕೇಶವಮೂರ್ತಿ ಕೊಲೆ ಪ್ರಕರಣದಲ್ಲಿ ಆರೋಪಿ ರಾಜೇಶ್ ಗೌಡ ದೋಷಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ತೀರ್ಮಾನಿಸಿದೆ.
ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ಈ ಕುರಿತಂತೆ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಾಧೀಶ ಹೊಸಮನಿ ಪುಂಡಲೀಕ ಅವರು ಬುಧವಾರ ಘೋಷಿಸಿದರು. ಅಲ್ಲದೆ, ಶಿಕ್ಷೆಯ ಪ್ರಮಾಣವನ್ನು ಗುರುವಾರ (ನವೆಂಬರ್ 16) ಪ್ರಕಟಿಸುವುದಾಗಿ ತಿಳಿಸಿದರು.
ಪ್ರಕರಣದ ಹಿನ್ನೆಲೆ ಏನು ? : ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಆಚಾರ್ಯ ಎಂಜಿನಿಯರಿಂಗ್ ಕಾಲೇಜು ಬಳಿ 2017 ರ ಜನವರಿ 13 ರಂದು ಮಧ್ಯಾಹ್ನ 3.15 ರ ಸಮಯದಲ್ಲಿ ಅಮಿತ್ ಕೇಶವಮೂರ್ತಿ ಅವರು ಆರೋಪಿ ರಾಜೇಶ್ ಅವರ ಪತ್ನಿ ಪಿಡಿಒ ಶ್ರುತಿಗೌಡ ಅವರೊಂದಿಗೆ ಸ್ವಿಫ್ಟ್ ಕಾರಿನಲ್ಲಿ ಕುಳಿತಿದ್ದರು. ಆಗ ಶ್ರುತಿ ಗೌಡ ಅವರಿಗೆ ಸೇರಿದ ಈ ಕಾರು ಹಿಂಬಾಲಿಸಿಕೊಂಡು ಬಂದಿದ್ದ ರಾಜೇಶ್, ಕಾರಿನ ಬಾಗಿಲು ತೆರೆದು ತಮ್ಮ ಬಳಿ ಇದ್ದ ಪಿಸ್ತೂಲಿನಿಂದ ಅಮಿತ್ ಮೇಲೆ ಏಕಾಏಕಿ ಗುಂಡು ಹಾರಿಸಿ ಕೊಂದಿದ್ದ.
ಶ್ರುತಿ ಗೌಡ ಅವರ ನಡೆ ಮತ್ತು ಚಟುವಟಿಕೆಗಳ ಮೇಲೆ ಸದಾ ಸಂಶಯ ವ್ಯಕ್ತಪಡಿಸುತ್ತಿದ್ದ ರಾಜೇಶ್, ಶ್ರುತಿ ಬಳಸುವ ಕಾರಿಗೆ ಜಿಪಿಎಸ್ ಅಳವಡಿಸಿ ಅದರ ಮುಖಾಂತರ ಅವರಿದ್ದ ಸ್ಥಳಕ್ಕೆ ಹಿಂಬಾಲಿಸಿಕೊಂಡು ಬಂದಿದ್ದರು. ಅಮಿತ್ ಮೃತಪಟ್ಟ ಸುದ್ದಿ ತಿಳಿದ ನಂತರ ಶ್ರುತಿ ಗೌಡ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಸಂಬಂಧ ತನಿಖೆ ನಡೆಸಿದ್ದ ಸೋಲದೇವನಹಳ್ಳಿ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಈ ಪ್ರಕರಣದ ಮತ್ತೊಬ್ಬ ಆರೋಪಿಯಾಗಿದ್ದ ರಾಜೇಶ್ ತಂದೆ ಗೋಪಾಲಕೃಷ್ಣ (82) ವಿಚಾರಣೆಗೂ ಮುನ್ನವೇ ಸಾವನ್ನಪ್ಪಿದ್ದರು. ಅಮಿತ್ ಕೇಶವಮೂರ್ತಿ ಅಮೆರಿಕದಲ್ಲಿ ಎಲ್‌ಎಲ್‌ಎಂ ಸ್ನಾತಕೋತ್ತರ ಪದವಿ ಪಡೆದಿದ್ದರು. ನೆಲಮಂಗಲ ಮತ್ತು ಬೆಂಗಳೂರು ನಗರದಲ್ಲಿ ವಕೀಲಿಕೆ ನಡೆಸುತ್ತಿದ್ದರು.
ಇದನ್ನೂ ಓದಿ: ಡಿಕೆಶಿ ವಿರುದ್ಧದ ತನಿಖೆಗೆ ಅನುಮತಿ ನೀಡಿದ್ದ ಆದೇಶ ರದ್ದು ಕೋರಿ ಅರ್ಜಿ: ಬುಧವಾರ ವಿಚಾರಣೆ