ಬೆಂಗಳೂರು: ರಾಜಕಾಲುವೆ ಮತ್ತು ಬೃಹತ್ ನೀರುಗಾಲುವೆ ಸೇರಿ ಸರ್ಕಾರಿ ಜಾಗಗಳ ಒತ್ತುವರಿ ಕಾರ್ಯಾಚರಣೆ ಕೈಗೆತ್ತಿಕೊಂಡಿರುವ ಬಿಬಿಎಂಪಿ ನಾಮಕಾವಸ್ಥೆ ಎಂಬಂತೆ ತೆರವು ಕಾರ್ಯಾಚರಣೆ ನಡೆಸುತ್ತಿದೆ ಎನ್ನುವ ದೂರುಗಳು ಕೇಳಿ ಬಂದಿವೆ.
ಇತ್ತೀಚೆಗಷ್ಟೇ ಪಾಲಿಕೆ ಬಿಡುಗಡೆ ಮಾಡಿದ್ದ ಒತ್ತುವರಿದಾರರ ಪಟ್ಟಿಯಲ್ಲಿ ಪ್ರಭಾವಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಬಡ ಮತ್ತು ಮಧ್ಯಮ ವರ್ಗದವರ ಮನೆಗಳನ್ನಷ್ಟೇ ತೆರವು ಕಾರ್ಯಾಚರಣೆ ಮಾಡಲಾಗುತ್ತಿದೆಯೇ ಹೊರತು ಪ್ರಭಾವಿ ವ್ಯಕ್ತಿಗಳತ್ತ ಸುಳಿಯುತ್ತಿಲ್ಲ. ಇದರಿಂದ ಆರಂಭದಲ್ಲೇ ಶೂರತ್ವ ಪ್ರದರ್ಶಿಸಿದ ಬಿಬಿಎಂಪಿ, ಐದು ದಿನದ ಕಾರ್ಯಾಚರಣೆ ನಡೆಸಿ ಬೆಟ್ಟ ಅಗೆದು ಇಲಿ ಹಿಡಿಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ: 3 ವಲಯಗಳ 11 ಒತ್ತುವರಿ ತೆರವು ಕಾರ್ಯಾಚರಣೆ ಪೂರ್ಣ : ಬಿಬಿಎಂಪಿ
ನಗರದಲ್ಲಿ ಪ್ರಮುಖ ರಸ್ತೆಗಳ ಮೇಲೆ ನೀರು ಹರಿಯಲು ರಾಜಕಾಲುವೆ ಒತ್ತುವರಿ ಮುಖ್ಯ ಕಾರಣವೆಂದು ಗುರುತಿಸಲಾಗಿತ್ತು. ಒತ್ತುವರಿ ಮಾಡಿಕೊಂಡಿರುವ ಕಟ್ಟಡಗಳನ್ನು ಗುರುತಿಸಿ ನೀರಿನ ಸಹಜ ಹರಿವಿಗೆ ಇರುವ ಅಡೆತಡೆಗಳನ್ನು ನಿವಾರಿಸಲು ಪಾಲಿಕೆ ಮುಂದಾಗಿತ್ತು. ಒತ್ತುವರಿದಾರರ ಪಟ್ಟಿಯಲ್ಲಿ ಪ್ರತಿಷ್ಠಿತ ಎಪ್ಸಿಲಾನ್ ಮತ್ತು ದಿವ್ಯಶ್ರೀ ವಿಲ್ಲಾಗಳಿಂದಲೂ ಒತ್ತುವರಿ ಮಾಡಿಕೊಂಡಿದ್ದ ವಿಚಾರ ಬಯಲಾಗಿತ್ತು. ಒತ್ತುವರಿ ಮಾಡಿಕೊಂಡ ಲೇಔಟ್ ಹಾಗೂ ಕಂಪನಿಯ ಹೆಸರು, ಸರ್ವೇ ಸಂಖ್ಯೆ ಸಮೇತ ಅಧಿಕಾರಿಗಳು ಬಹಿರಂಗಪಡಿಸಿದ್ದರು.
ವಿಲೇಜ್ ಮ್ಯಾಪ್ ಪ್ರಕಾರ ಒತ್ತುವರಿಯಾಗಿದೆ ಎಂದು ಪಾಲಿಕೆ ಹೇಳಿತ್ತು. ಈ ಸ್ಥಳದಲ್ಲಿ ರಾಜಕಾಲುವೆ ಇತ್ತು ಎಂದು ಸ್ಥಳೀಯರೂ ಮಾಹಿತಿ ನೀಡಿದ್ದರು. ಆದರೂ ಒತ್ತುವರಿ ಮಾಡಬೇಕಿದ್ದ ಪಾಲಿಕೆ ಜಾಗ, ಅಧಿಕಾರಿಗಳು ಎಪ್ಸಿಲಾನ್ ಮತ್ತು ದಿವ್ಯಶ್ರೀ ವಿಲ್ಲಾಗಳಿಂದ ಒತ್ತುವರಿಯಾಗಿಲ್ಲ ಎಂದು ಇದೀಗ ಉಲ್ಟಾ ಹೊಡೆದಿದ್ದಾರೆ. ಒತ್ತುವರಿ ತೆರವು ಮಾಡದಿರಲು ಅಧಿಕಾರಿಗಳು ಲಂಚ ಪಡೆದಿರುವ ಗಂಭೀರ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ಕಾಂಪೌಂಡ್ಗೆ ಮಾತ್ರ ಸೀಮಿತವಾದ ಒತ್ತುವರಿ ತೆರವು ಕಾರ್ಯಾಚರಣೆ: ಚುನಾವಣೆ ದೃಷ್ಟಿಯಿಂದ ಮೃದುವಾದ ಸರ್ಕಾರ
ನೆಪಮಾತ್ರಕ್ಕೆ ನಡೆಯುತ್ತಿರುವ ಒತ್ತುವರಿ ತೆರವು.. ಬಿಬಿಎಂಪಿಯ ದಾಸರಹಳ್ಳಿ ವಲಯ, ನೆಲಗದರನ ಹಳ್ಳಿ ರಸ್ತೆ, ರುಕ್ಮಿಣಿ ನಗರದಲ್ಲಿ 3 ಕಾಲು ಗುಂಟೆ ಜಾಗ ಒತ್ತುವರಿ ಮಾಡಿಕೊಂಡಿದ್ದ 11 ಒತ್ತುವರಿಗಳ ಪೈಕಿ ನಿನ್ನೆ ಬಹುತೇಕ ಭಾಗವನ್ನು ತೆರವುಗೊಳಿಸಿದ್ದು, ಈ ಸ್ಥಳದಲ್ಲಿ ತೆರವು ಕಾರ್ಯಾಚರಣೆ ಮುಂದುವರೆಸಿ ಬಾಕಿಯಿದ್ದ ಕೆಲಸವನ್ನು ಪೂರ್ಣಗೊಳಿಸಲಾಗಿದೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.
ಕೆಲ ಭಾಗದಲ್ಲಿ ಹಿಟಾಚಿ ಮೂಲಕ ತೆರವುಗೊಳಿಸಲಾಗಿದ್ದು, ಇನ್ನೂ ಕೆಲವೆಡೆ ಮನೆಯ ಕೆಲ ಭಾಗವನ್ನು ಮನೆಯ ಮಾಲೀಕರೇ ಸ್ವತಃ ತೆರವುಗೊಳಿಸಿದ್ದಾರೆ. ಕೂಡಲೇ ಮಳೆ ನೀರುಗಾಲುವೆ ಮೇಲೆಯಿರುವ ಭಾಗವನ್ನು ತೆರವುಗೊಳಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಜಕಾಲುವೆ ಒತ್ತುವರಿದಾರರಿಗೆ ಶಾಕ್: ಮಹದೇವಪುರದಲ್ಲಿ ಜೆಸಿಬಿಗಳ ಘರ್ಜನೆ
ಎಲ್ಲೆಲ್ಲಿ ತೆರವು ಕಾರ್ಯಾಚರಣೆ.. ಯಲಹಂಕ ವಲಯ, ಕುವೆಂಪುನಗರ ವಾರ್ಡ್, ಸಿಂಗಾಪುರ ಲೇಔಟ್ ನಲ್ಲಿ ಒತ್ತುವರಿಯಾಗಿದ್ದ ಜಾಗದ ತೆರವು ಕಾರ್ಯಾಚರಣೆಯನ್ನು ಮುಂದುವರಿಸಲಾಗಿದ್ದು, ಲ್ಯಾಂಡ್ ಮಾರ್ಕ್ ಅಪಾರ್ಟ್ಮ್ಂಟ್ನಲ್ಲಿ ಬಾಕಿಯಿದ್ದ ಕೆಲಸವನ್ನು ಪೂರ್ಣಗೊಳಿಸಲಾಗಿದೆ. ಸಿಂಗಾಪುರ ಲೇಔಟ್‌ನಲ್ಲಿ ಒತ್ತುವರಿ ಮಾಡಿಕೊಂಡಿದ್ದ ಸ್ಥಳದಲ್ಲಿ ಜೆಸಿಬಿ ಮೂಲಕ ಮಳೆ ನೀರು ಕಾಲುವೆಯನ್ನು ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮಹದೇವಪುರ ವಲಯದಲ್ಲಿ ಕೇವಲ ಸರ್ವೇ ಕಾರ್ಯ.. ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಭೂಮಾಪಕ ಇಲಾಖೆ ವತಿಯಿಂದ ಕಂದಾಯ ಇಲಾಖೆಯ ತಹಶೀಲ್ದಾರ್ ನೇತೃತ್ವದಲ್ಲಿ ವಾಗ್ದೇವಿ ಮುನ್ನೇಕೊಳಲು, ಕಸವನಹಳ್ಳಿ ಗ್ರಾಮ, ದೊಡ್ಡಕನ್ನಹಳ್ಳಿಯಲ್ಲಿ ಬರುವ ಎ.ಬಿ.ಕೆ ವಿಲೇಜ್, ಪ್ರೆಸ್ಟೀಜ್ ಟೆಕ್ ಪಾರ್ಕ್, ವಿಪ್ರೋ, ಸನ್ನೀ ಬ್ರೂಕ್ಸ್, ಬೆಳತ್ತೂರು ಗ್ರಾಮ, ಸಾದರಮಂಗಲ ಗ್ರಾಮ, ಬಿಲ್ಲಿನೇನಿ ಸಾಸ ಅಪಾರ್ಟ್ಮ್ಂಟ್‌ನ ಒಳ ಪ್ರದೇಶ, ಸಾಯಿ ಗಾರ್ಡನ್ ಬಡಾವಣೆ, ವರ್ತೂರಿನಿಂದ ಶೀಲವಂತನ ಕೆರೆ ಸೇರಿದಂತೆ ಇನ್ನಿತರೆ ಕಡೆ ಸರ್ವೇ ಕಾರ್ಯ ನಡೆಸಿ ಮಾರ್ಕಿಂಗ್ ಮಾಡಲಾಗುತ್ತಿದೆ ಎಂದು ಮಹದೇವಪುರ ವಲಯ ಮುಖ್ಯ ಅಭಿಯಂತರ ಬಸವರಾಜ್ ಕಬಾಡೆ ಹೇಳಿದ್ದಾರೆ.
ಇದನ್ನೂ ಓದಿ: ಒತ್ತುವರಿ ತೆರವು ವೇಳೆ ನಲಪಾಡ್ ವಾಗ್ವಾದ : ತೆರವು ತಡೆಯಲು ಯತ್ನ, ಬಗ್ಗದ ಪಾಲಿಕೆ ಅಧಿಕಾರಿಗಳು
ಸರ್ವೇ ಮಾಡಿ ಮಾರ್ಕ್ ಮಾಡಿದ ನಂತರ ಖಾಲಿ ಜಾಗ, ಕಾಂಪೌಂಡ್ ಗೋಡೆ ಕೂಡಲೇ ತೆರವು ಕಾರ್ಯಾಚರಣೆ ನಡೆಸಲಾಗುವುದು. ರಾಜಕಾಲುವೆಗಳ ಮೇಲೆ ಜನರು ವಾಸಿಸುವ ಮನೆಗಳಿದ್ದಲ್ಲಿ ಸಂಬಂಧಪಟ್ಟವರಿಗೆ ಕಂದಾಯ ಇಲಾಖೆಯ ತಹಶೀಲ್ದಾರ್ ನೋಟಿಸ್ ನೀಡಿ ಮೂರು ದಿನ ಕಾಲಾವಕಾಶ ನೀಡುತ್ತಾರೆ. ಅದಾದ ಬಳಿಕ ನಿಯಮಾನುಸಾರ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಬಸವರಾಜ್ ಕಬಾಡೆ ತಿಳಿಸಿದ್ದಾರೆ.