ಬೆಂಗಳೂರು: ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಲಗ್ಗೆರೆ ವಾರ್ಡ್ನ ಫ್ರೆಂಡ್ಸ್ ಸರ್ಕಲ್ನಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಆಸರೆ ವೃದ್ಧಾಶ್ರಮಕ್ಕೆ ನೀರು ನುಗ್ಗಿದೆ. ಆದರೆ ವೃದ್ಧಾಶ್ರಮದ ಕಟ್ಟಡ ಮಾಲೀಕರೇ ರಾಜಕಾಲುವೆ ಒತ್ತುವರಿ ಮಾಡಿ, ತಡೆಗೋಡೆ ನಿರ್ಮಿಸಿದ್ದರು. ಇದರಿಂದ ಕಳೆದ ಬಾರಿ ಮಳೆ ಬಂದಾಗ ಅಲ್ಲಿನ 100 ಕ್ಕೂ ಹೆಚ್ಚು ಮನೆಗಳಿಗೆ ನೀರುನುಗ್ಗಿ ಹಾನಿಯಾಗಿದೆ.
ಹೀಗಾಗಿ ಕಾನೂನು ಪ್ರಕಾರ, ರಾಜಕಾಲುವೆ ಒತ್ತುವರಿ ಮಾಡಿ ಎರಡು ಕಟ್ಟಡಗಳಿಗೆ ಅಡ್ಡಲಾಗಿ ಕಟ್ಟಿದ್ದ ತಡೆಗೋಡೆಯನ್ನು ನಿನ್ನೆ ಮಧ್ಯಾಹ್ನ 12 ಗಂಟೆಗೆ ಒಡೆಯಲಾಗಿದೆ. ಇದರಿಂದ ಉಳಿದ ಮನೆಗಳಿಗೆ ನೀರು ನುಗ್ಗುವುದನ್ನು ತಪ್ಪಿಸಲಾಗಿದೆ ಎಂದು ವಾರ್ಡ್ ಇಂಜಿನಿಯರ್ ಮಂಜುನಾಥ್ ಮಾಹಿತಿ ನೀಡಿದರು.
ಅಬ್ಬರಿಸಿದ ಮಳೆಯಿಂದಾಗಿ ರಾಜಕಾಲುವೆಯಿಂದ ಆಸರೆ ಅನಾಥಾಶ್ರಮದ ಒಳಗೆ ಕೊಳಚೆ ನೀರು ನುಗ್ಗಿದ್ದು ಹಾಸಿಗೆ, ಬೆಡ್ ಶೀಟ್, ತಟ್ಟೆ ಲೋಟ, ಅಡುಗೆ ಸಾಮಗ್ರಿಗಳು ನೀರಲ್ಲಿ ಮುಳುಗಿವೆ. ಮೊದಲೇ ಅನಾಥರಾಗಿದ್ದ ಹಿರಿಜೀವಗಳು, ಮಳೆಯಿಂದಾದ ಅನಾಹುತಕ್ಕೆ ಅನ್ನ ನೀರು, ನೆಲೆ ಇಲ್ಲದೇ ಪರದಾಡುವಂತಾಗಿದೆ.
ಸ್ಥಳೀಯ ಜೆಡಿಎಸ್ ಮುಖಂಡ ರುದ್ರೇಗೌಡ, ಗೋಡೆ ಒಡೆಯಲು ಕಾರಣ ಎಂದೂ ದೂರುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ವೃದ್ಧಾಶ್ರಮಕ್ಕೆ ತೊಂದರೆ ಆಗುತ್ತದೆ ಎಂದು ಅಡ್ಡಲಾಗಿ ಗೋಡೆಯನ್ನ ಕಟ್ಟಲಾಗಿತ್ತು. ಆದ್ರೆ ಅದೇ ತಡೆಗೋಡೆ ಸುತ್ತಮುತ್ತಲಿನ ನೂರಾರು ಮನೆಗಳಿಗೆ ತೊಂದರೆ ತಂದೊಡ್ಡಿದೆ. ಎರಡು ದಿನಗಳಿಂದ ಸುರಿದ ಮಳೆಯಿಂದ ರಾಜಕಾಲುವೆ ಉಕ್ಕಿಹರಿದಿದೆ. ಸುತ್ತಮುತ್ತಲು ಇದ್ದ ಮನೆಗಳಿಗೆ ರಾಜಕಾಲುವೆಯ ನೀರೆಲ್ಲಾ ನುಗ್ಗಿ ಅವಾಂತರ ಸೃಷ್ಟಿಸಿದೆ ಎಂದು ಆಶ್ರಮದ ಮೇಲೆ ಪ್ರತ್ಯಾರೋಪ ಮಾಡಿದ್ದಾರೆ.
ಘಟನೆಗೆ ಸಾಕ್ಷಿಯಾದ ಈ ಸ್ಥಳದಲ್ಲಿ ಇಂದು ಸ್ಥಳೀಯರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಪೊಲೀಸರು ಇದ್ದರೂ ಸಹ ಏನು ತೋಚದಂತೆ ಸುಮ್ಮನಿದ್ದರು. ಆದರೆ ನಿನ್ನೆ ಸ್ಥಳಕ್ಕೆ ಬಂದು ತಡೆಗೋಡೆ ಉರುಳಿಸಿ ಹೋದ ಪಾಲಿಕೆ ಅಧಿಕಾರಿಗಳೂ ಸ್ಥಳದಲ್ಲಿರಲಿಲ್ಲ. ಈ ಬಗ್ಗೆ ಈಟಿವಿ ಭಾರತಕ್ಕೆೆ ಪ್ರತಿಕ್ರಿಯೆ ನೀಡಿದ ಜಂಟಿ ಆಯುಕ್ತ ಪರಶುರಾಮೇಗೌಡ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ಹೇಳಿದ್ದಾರೆ.