ಬೆಂಗಳೂರು : ನಿನ್ನೆ ರಾತ್ರಿ ನಿರಂತರವಾಗಿ ಸುರಿದ ಭಾರಿ ಮಳೆಯಿಂದಾಗಿ ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದ ಪರಿಮಳನಗರದ ಮನೆ ಮತ್ತು ರಸ್ತೆಗಳಿಗೆ ನೀರು ನುಗ್ಗಿದೆ.
ಈ ಹಿನ್ನೆಲೆ ಸ್ಥಳೀಯ ಶಾಸಕ ಹಾಗೂ ಅಬಕಾರಿ ಸಚಿವ ಕೆ ಗೋಪಾಲಯ್ಯ ಅವರು ಬಿಬಿಎಂಪಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ಕೂಡಲೇ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮಾಜಿ ಕಾರ್ಪೊರೇಟರ್ ಮಾದೇವ್ ಕೂಡ ಸಾಥ್ ನೀಡಿದರು. ಇದೇ ವೇಳೆ ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದ ಕಂಠೀರವ ನಗರದ ಸೇತುವೆ ಕಾಮಗಾರಿ ನಿಧಾನವಾಗಿದೆ. ಶ್ರೀಘ್ರದಲ್ಲೇ ಪ್ರಾರಂಭಿಸಬೇಕೆಂದು ಬಿಡಿಎ ಕಮಿಷನರ್ ರಾಜೇಶ್ ಗೌಡ ಅವರಿಗೆ ತಿಳಿಸಿದರು.
ಮಳೆಯಿಂದಾಗಿ ಬಳ್ಳಾರಿ ರಸ್ತೆಯ ಗಾಲ್ಫ್ ಕ್ಲಬ್ ಸಮೀಪದ ಅಂಡರ್ ಪಾಸ್ನಲ್ಲಿ ನೀರು ನಿಂತಿದೆ. ಪಾಲಿಕೆಯಿಂದ ಮಳೆ ನೀರು ಪಂಪ್ ಮಾಡಿ ಹೊರಗೆ ಹಾಕಲಾಗುತ್ತಿದೆ. ಇದಲ್ಲದೆ ಮಳೆ ತಂದ ಅವಾಂತರದಿಂದ ಏಳು ಮರಗಳು ಧರಾಶಾಹಿಯಾಗಿವೆ.
20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಯಲಹಂಕ ವಲಯದಲ್ಲಿ ಹತ್ತು ಮನೆಗಳಿಗೆ ನೀರು ನುಗ್ಗಿದೆ, ಎರಡು ಕಡೆ ಮರಗಳು ಬಿದ್ದಿವೆ. ಒಟ್ಟು 6 ಕಡೆಗಳಿಂದ ಬೀದಿದೀಪ ಹಾಳಾಗಿರುವ ಕುರಿತು ದೂರುಗಳು ಬಂದಿವೆ.
ಇನ್ನು, ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ್ ಗುಪ್ತ ಮಾತನಾಡಿ, ತುಂತುರು ಮಳೆ ಆದ್ರೂ ನಗರದಲ್ಲಿ ನಿರಂತರ ಮಳೆಯಾಗಿದೆ. ಕೆಲವು ಕಡೆ ಮಣ್ಣಲ್ಲಿ ಕಟ್ಟಿರುವ ಗೋಡೆಗಳು ಬಿದ್ದಿರುವ ಘಟನೆ ನಡೆದಿದೆ.
ಹೆಚ್ಎಎಲ್ ಕಾಂಪೌಂಡ್ ಗೋಡೆ, ಖಾಸಗಿ ಕಟ್ಟಡಗಳ ಗೋಡೆಗಳು ಬಿದ್ದಿವೆ. ಈ ಕಾರಣಕ್ಕಾಗಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಬಗ್ಗೆ ರ್ಯಾಪಿಡ್ ಸರ್ವೆ ನಡೆಯುತ್ತಿದೆ.
ಈ ಹಿಂದೆ ಗುರುತಿಸಿದ್ದ 185 ಶಿಥಿಲಾವಸ್ಥೆ ಕಟ್ಟಡಗಳಲ್ಲಿ 10 ನೆಲಸಮ ಮಾಡಲಾಗಿದೆ. ಉಳಿದವುಗಳಿಗೆ ನೋಟಿಸ್ ಜಾರಿ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಮಳೆಗಾಲದಲ್ಲಿ ಜನರಿಗೆ ಸ್ವಲ್ಪ ಅನಾನುಕೂಲವಾಗುತ್ತಿರುವುದು ನಿಜ, ಮುಂದಿನ ದಿನಗಳಲ್ಲಿ ಮಳೆ ಅನಾಹುತಗಳಾಗದಂತೆ ಸರಿಪಡಿಸಲಾಗುವುದು ಎಂದರು. ದೂರುಗಳಿದ್ದರೆ, ಕಟ್ಟಡಗಳ ಶಿಥಿಲಾವಸ್ಥೆಯಲ್ಲಿರುವುದನ್ನು ಗಮನಿಸಿದರೆ ಜನರೇ ಸ್ವತಃ ವೆಬ್ಸೈಟ್ನಲ್ಲಿ ದೂರು ಸಲ್ಲಿಸಬಹುದು ಎಂದು ಹೇಳಿದ್ರು.