ಬೆಂಗಳೂರು : ಕಳೆದ 120 ವರ್ಷಗಳ ಇತಿಹಾಸದಲ್ಲಿ ನಗರದಲ್ಲಿ ಇಷ್ಟು ಪ್ರಮಾಣದ ಮಳೆಯಾಗಿರುವುದು ಇದೇ ಮೊದಲ ಬಾರಿ ಎಂದು ಕೆಎಸ್ಎನ್ಡಿಎಂಸಿ ನಿರ್ದೇಶಕ ಶ್ರೀನಿವಾಸ ರೆಡ್ಡಿ ತಿಳಿಸಿದರು. ಗುರುವಾರ ಸಂಜೆ ಹಾಗೂ ರಾತ್ರಿ ವೇಳೆ ಕೆಂಗೇರಿ ಹಾಗೂ ರಾಜರಾಜೇಶ್ವರಿ ವಲಯದಲ್ಲಿ ಸುರಿದ ಮಳೆ ದಾಖಲೆ ಸೃಷ್ಟಿಸಿದೆ. ಈ ಭಾಗದಲ್ಲಿ 185.5 ಮಿ.ಮೀಟರ್ ಮಳೆಯಾಗಿದೆ.
1810ರಲ್ಲಿ 101 ಮಿ.ಮೀ ಮಳೆಯಾಗಿತ್ತು. ಅದಾದ ನಂತರ ಒಂದು ದಿನದಲ್ಲಿ ಇಷ್ಟು ಪ್ರಮಾಣದ ಮಳೆಯಾಗಿರುವುದು ಎಲ್ಲೂ ದಾಖಲಾಗಿಲ್ಲ ಎಂದರು. 2017ರಲ್ಲಿ ಬನ್ನೇರುಘಟ್ಟದಲ್ಲಿ ಸುರಿದ 183 ಮಿ.ಮೀ ಮಳೆ ಅತಿಹೆಚ್ಚು ಎಂದುಕೊಂಡಿದ್ದೆವು. ಆದರೆ, ನಿನ್ನೆಯ ಮಳೆ ಆ ದಾಖಲೆ ಅಳಿಸಿದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಎಲ್ಲಾ ಕಡೆ ಉತ್ತಮ ಮಳೆಯಾಗಿದೆ. ಸರಾಸರಿ 53 ಮಿ.ಮೀ ಮಳೆಯಾಗಿದೆ. ಇಂದು, ನಾಳೆ ಮಳೆ ಕಡಿಮೆಯಾಗುವ ಸಾಧ್ಯತೆ ಇದೆ ರೆಡ್ಡಿ ತಿಳಿಸಿದರು.
ರಾಜ್ಯದಲ್ಲಿ ಮಳೆ ಕಡಿಮೆಯಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ.30ರಷ್ಟು ಮಳೆ ಕೊರತೆಯಾಗಿದೆ. ಇಡೀ ರಾಜ್ಯದಲ್ಲಿ 7-8% ಮಳೆ ಕಡಿಮೆಯಾಗಿದೆ. ಆದರೆ, ಕಳೆದ ಎರಡು ದಿನಗಳನ್ನು ಗಮನಿಸಿದ್ರೆ, ದಕ್ಷಿಣ ಒಳನಾಡಿನಲ್ಲಿ ಈಗ ಮಳೆಯಾಗುತ್ತಿದೆ. ಇದೀಗ ದಕ್ಷಿಣ ಒಳನಾಡಿನಲ್ಲಿ 2% ಹೆಚ್ಚು ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ 4% ಹೆಚ್ಚಾಗಿ ಮಳೆಯಾಗಿದೆ. ಆದರೆ, ಮಲೆನಾಡು ಹಾಗೂ ಕರಾವಳಿಯಲ್ಲಿ ಉತ್ತಮ ಮಳೆಯಾಗಿಲ್ಲ.
ಮುಂದಿನ ಮುನ್ಸೂಚನೆ ನೋಡಿದಾಗ ಕೊಂಕಣ್ ಗೋವಾ ಭಾಗದಲ್ಲಿ ಹಾಗೂ ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಇರುವುದರಿಂದ ಉತ್ತಮ ಮಳೆಯಾಗಲಿದೆ ಎಂದರು. ಜೂನ್ 29ರಿಂದ ಜುಲೈ 3ರವರೆಗೆ ರಾಜ್ಯದಲ್ಲಿ ಹೆಚ್ಚು ಮಳೆಯಾಗಲಿದೆ. ಮಲೆನಾಡು, ಕರಾವಳಿ ಭಾಗದಲ್ಲಿಯೂ 29ರ ನಂತರ ಹೆಚ್ಚು ಮಳೆಯಾಗಲಿದೆ. ಈವರೆಗೆ ಸುರಿದ ಮಳೆಯಿಂದ ಉತ್ತಮ ಬಿತ್ತನೆಗೆ ಸಹಕಾರಿಯಾಗಲಿದೆ ಎಂದರು.