ಬೆಂಗಳೂರು: ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಮಳೆ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈಗ ಪೂರ್ವ ಮುಂಗಾರು ಗುಡುಗು, ಸಿಡಿಲಿನ ಸಮೇತ ಅಬ್ಬರಿಸುತ್ತಿದೆ. ಜೂನ್ 1ರ ವರೆಗೆ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪೂರ್ವ ಮುಂಗಾರಿನ ಪರಿಣಾಮ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಜೂನ್ 1ರ ತನಕ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಾತ್ರ ಗಾಳಿಯೊಂದಿಗೆ ಕೂಡಿದ ಮಳೆಯಾಗುವ ಸಾಧ್ಯತೆ ಇದೆ. ಗಂಟೆಗೆ 30 ರಿಂದ 40 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಹೀಗಾಗಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಆದ್ದರಿಂದ ಜನರು ಎಚ್ಚರದಿಂದ ಇರಬೇಕು ಎಂದು ಮನವಿ ಮಾಡಿದೆ.
ಕರಾವಳಿ ಭಾಗದಲ್ಲಿ ಮೋಡ ಕವಿದ ವಾತಾವರಣ : ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗಲಿದೆ. ಕರ್ನಾಟಕದ ಕರಾವಳಿ ಭಾಗದಲ್ಲಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಅಂದಾಜಿಸಿದೆ.
ಸಿಲಿಕಾನ್ ಸಿಟಿಯಲ್ಲಿ ಜೂನ್ 1ರವರೆಗೆ ಮಳೆ: ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು, ವಿಜಯನಗರ ಮತ್ತು ರಾಯಚೂರಿನಲ್ಲಿ ಮಳೆಯಾಗಲಿದೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಸಂಜೆ ಸಮಯದಲ್ಲಿ ಜೂನ್ 1ರ ತನಕ ಮಳೆಯ ಮುನ್ಸೂಚನೆ ನೀಡಲಾಗಿದೆ.
ಮರದ ರೆಂಬೆ ಧರೆಗೆ: ಇನ್ನೊಂದೆಡೆ ಬೆಂಗಳೂರಿನಲ್ಲಿ (ಮೇ 22-2023) ಇತ್ತೀಚೆಗೆ ಸುರಿದ ಆಲಿಕಲ್ಲು ಸಹಿತ ಮಳೆಗೆ 400ಕ್ಕೂ ಅಧಿಕ ಮರಗಳು ಧರೆಗೆ ಉರುಳಿದ್ದವು. ಸುಮಾರು 1600ಕ್ಕೂ ಅಧಿಕ ಮರದ ರೆಂಬೆಗಳು ಮುರಿದು ರಸ್ತೆಗೆ ಬಿದ್ದಿದ್ದವು. ಕಬ್ಬನ್ ಪಾರ್ಕ್ ಒಂದರಲ್ಲಿಯೇ 50ಕ್ಕೂ ಹೆಚ್ಚು ಮರಗಳು ಬಿದ್ದಿವೆ. ಎರಡು ದಿನದ ಮಳೆಗೆ ತತ್ತರಿಸುತ್ತಿರುವ ತ್ಯಾಜ್ಯ ವಿಲೇವಾರಿಗೆ ಪೌರಕಾರ್ಮಿಕರು ಪರದಾಟ ನಡೆಸುತ್ತಿದ್ದು, ಹಲವು ಪ್ರಮುಖ ರಸ್ತೆಗಳು ತಿಪ್ಪೆ ಗುಂಡಿಯಾಗಿ ಮಾರ್ಪಟ್ಟಿವೆ.
ಎರಡು ದಿನ ಸುರಿದ ಭಾರಿ ಮಳೆಗೆ ನಗರದಲ್ಲಿ 400ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದವು. 1600ಕ್ಕೂ ಅಧಿಕ ಮರಗಳ ಕೊಂಬೆ ಮುರಿದಿದ್ದವು. ರಸ್ತೆಗೆ ಬಿದ್ದ ಮರಗಳಿಂದಾಗಿ ವಾಹನ ಸವಾರರು, ಸಾರ್ವಜನಿಕರು ಪರದಾಡಿದ್ದರು. ಈ ಸಂಬಂಧ ಬಿಬಿಎಂಪಿಗೆ 600ಕ್ಕೂ ಅಧಿಕ ದೂರುಗಳು ಬಂದಿದ್ದವು. ಎರಡು ದಿನದ ಮಳೆಗೆ ನಗರದ 70ಕ್ಕೂ ಅಧಿಕ ಮನೆಗಳಿಗೆ ಮಳೆ ನೀರು ನುಗ್ಗಿತ್ತು. ಮಹಾಲಕ್ಷ್ಮಿ ಲೇಔಟ್ ಒಂದರಲ್ಲೇ 20ಕ್ಕೂ ಅಧಿಕ ಕಡೆ ಮನೆಗಳಿಗ ನೀರು ನುಗ್ಗಿತ್ತು. ನಾಗರಿಕರು ದೂರು ನೀಡಿರುವ ಹಿನ್ನೆಲೆ ಬಿಬಿಎಂಪಿ 200 ಕ್ಕೂ ಹೆಚ್ಚು ಕಡೆ ಬಿಬಿಎಂಪಿ ಮರಗಳ ತೆರವು ಕಾರ್ಯಾಚರಣೆ ನಡೆಸಿದೆ. 50 ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಕೆಲಸ ಮಾಡಿದ್ದರು.
ಇದನ್ನೂ ಓದಿ: ಮುಂದಿನ ಐದು ದಿನಗಳ ವರೆಗೆ ರಾಜ್ಯದಲ್ಲಿ ಗುಡುಗು ಮಿಂಚು ಸಹಿತ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ