ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ಮೋಚಾ ಚಂಡಮಾರುತ ಉಂಟಾಗಿರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಮುಂದಿನ ಮೂರು ದಿನಗಳ ಕಾಲ ರಾಜ್ಯದ ಹಲವೆಡೆ ಮಳೆ ಎಚ್ಚರಿಕೆ ನೀಡಿದೆ. ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗಲಿದೆ. ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲೂ ಮಳೆ ಸಾಧ್ಯತೆ ಇದೆ ಎಂದಿದೆ.
ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಒಂದೆರಡು ಕಡೆ ಬಿರುಗಾಳಿಯ ವೇಗವು ಪ್ರತಿ ಗಂಟೆಗೆ 30-40 ಕಿ. ಮೀ ಇರುವ ಸಾಧ್ಯತೆಯಿದೆ. ಶುಕ್ರವಾರದಿಂದ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಒಣಹವೆ ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಇಲಾಖೆ ಹೇಳಿದೆ.
ಬೆಂಗಳೂರಲ್ಲಿ ಇನ್ನೂ ಮೂರು ದಿನ ಮಳೆ: ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರೆಯಲಿದ್ದು, ಸಂಜೆ ಅಥವಾ ರಾತ್ರಿಯ ಅವಧಿಯಲ್ಲಿ ಸಾಧಾರಣ ಮಳೆಯಾಗಲಿದೆ. ಇನ್ನೂ 3 ದಿನ ನಗರದಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ : ಆಗ್ನೇಯ ಬಂಗಾಳ ಕೊಲ್ಲಿ ಮತ್ತು ದಕ್ಷಿಣ ಅಂಡಮಾನ್ ಸಮುದ್ರಕ್ಕೆ ಹೊಂದಿಕೊಂಡಂತೆ ಇರುವ ಪ್ರದೇಶಗಳಲ್ಲಿ ವಾಯುಭಾರ ಕುಸಿತವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ (ಮೇ 8-2023)ರಂದು ಮಾಹಿತಿ ನೀಡಿತ್ತು. ಮೇ 9ರ ಸುಮಾರಿಗೆ ಆಯಾ ಪ್ರದೇಶಗಳಲ್ಲಿ ವಾಯುಭಾರ ಕುಸಿತವಾಗಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಮೇ 11ರವರೆಗೆ ಉತ್ತರ-ವಾಯುವ್ಯವಾಗಿ ಪೂರ್ವ ಮಧ್ಯ ಬಂಗಾಳ ಕೊಲ್ಲಿಯ ಕಡೆಗೆ ಮತ್ತು ಕ್ರಮೇಣ ಮರುಕಳಿಸುತ್ತದೆ. ಉತ್ತರ-ಈಶಾನ್ಯ ಕಡೆಗೆ ಬಾಂಗ್ಲಾದೇಶ-ಮ್ಯಾನ್ಮಾರ್ ಕರಾವಳಿಯ ಕಡೆಗೆ ಚಲಿಸುತ್ತದೆ ಎಂದು ಐಎಂಡಿ ತಿಳಿಸಿತ್ತು.
ಮೋಚಾ ಚಂಡಮಾರುತ ಅಂದ್ರೆ ಏನು ಗೊತ್ತಾ? : ಚಂಡಮಾರುತ ತೀವ್ರಗೊಂಡ ನಂತರ ಇದನ್ನು ಮೋಚಾ ಚಂಡಮಾರುತ ಎಂದು ಕರೆಯಲಾಗುವುದು. ಈ ಹೆಸರನ್ನು ಯೆಮೆನ್ ಸೂಚಿಸಿದೆ. ಇದು 500 ವರ್ಷಗಳ ಹಿಂದೆ ಜಗತ್ತಿಗೆ ಕಾಫಿಯನ್ನು ಪರಿಚಯಿಸಿದ ಕೆಂಪು ಸಮುದ್ರದ ಕರಾವಳಿಯಲ್ಲಿರುವ ಯೆಮೆನ್ ದೇಶದ ಮೋಚಾ (ಅಥವಾ ಮೋಖಾ)ನಿಂದ ಹುಟ್ಟಿಕೊಂಡಿದೆ. ಮೋಚಾವು ಚಾಕೊಲೇಟ್ ರುಚಿಯ ಬೆಚ್ಚಗಿನ ಪಾನೀಯವಾಗಿದೆ. ಅದು ಕಾಫಿಯ ರೂಪಾಂತರ ಪಾನೀಯವಾಗಿದೆ. ಚಂಡಮಾರುತವು ಆರಂಭದಲ್ಲಿ ಉತ್ತರ-ವಾಯುವ್ಯ ದಿಕ್ಕಿನಲ್ಲಿ ಮೇ 11ರವರೆಗೆ ಪೂರ್ವ ಮಧ್ಯ ಬಂಗಾಳ ಕೊಲ್ಲಿಯ ಕಡೆಗೆ ಚಲಿಸುವ ಸಾಧ್ಯತೆಯಿದ್ದು, ಬಳಿಕ ಕ್ರಮೇಣ ಉತ್ತರ- ಈಶಾನ್ಯಕ್ಕೆ ಬಾಂಗ್ಲಾದೇಶ- ಮ್ಯಾನ್ಮಾರ್ ಕರಾವಳಿಯ ಕಡೆಗೆ ಚಲಿಸುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ.
ಇದನ್ನೂ ಓದಿ: ಮೋಚಾ ಚಂಡಮಾರುತ ಎಫೆಕ್ಟ್: ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ..