ಬೆಂಗಳೂರು: ಅರಬ್ಬಿ ಸಮುದ್ರ ಹಾಗೂ ಹಿಂದೂ ಮಹಾಸಾಗರದಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆ, ಬೆಂಗಳೂರಲ್ಲಿ ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣ ಹಾಗೂ ತುಂತುರು ಮಳೆಯಾಗಿದೆ.
ರಾಜ್ಯದ ಹಲವೆಡೆ ಇದೇ ವಾತಾವರಣ ಇದ್ದು, ಇನ್ನೂ ಎರಡು - ಮೂರು ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅರಬ್ಬಿ ಸಮುದ್ರದ ಲಕ್ಷದ್ವೀಪ ಪ್ರದೇಶದಲ್ಲಿ ವಾಯುಭಾರ ಕುಸಿತದ ಪ್ರಮಾಣ ಹೆಚ್ಚಾಗಿದ್ದು, ಮುಂದಿನ ಮೂರು ದಿನ ಕರಾವಳಿ, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಹಲವೆಡೆ ಚಳಿಗಾಳಿ ಜೊತೆಗೆ ಅಲ್ಲಲ್ಲಿ ಮಳೆಯಾಗಲಿದೆ. ಶಿವಮೊಗ್ಗ, ತುಮಕೂರು, ಮೈಸೂರು, ಚಿತ್ರದುರ್ಗ, ಕರಾವಳಿ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.