ಬೆಂಗಳೂರು: ಹವಾಮಾನ ಇಲಾಖೆ ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಮಳೆ ಬರುವ ಸಾಧ್ಯತೆ ಇದೆಯೆಂದು ತಿಳಿಸಿದೆ. ಇಂದು ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ಇದರಿಂದ ಪಟಾಕಿ ವ್ಯಾಪಾರಿಗಳಲ್ಲಿ ವ್ಯಾಪಾರ ಕುಂಠಿತಗೊಳ್ಳುವ ಆತಂಕ ಹೆಚ್ಚಾಗಿದೆ. ಈಗಾಗಲೇ ರಾಜ್ಯ ಸರ್ಕಾರದ ಧಿಡೀರ್ ಎಂದು ಹಸಿರು ಪಟಾಕಿ ಮಾತ್ರ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ. ಕೋವಿಡ್ ಕಾರಣದಿಂದ ಜನರು ಪಟಾಕಿ ಕೊಳ್ಳುವುದು ಕಡಿಮೆ ಮಾಡಿರುವುದು ಪಟಾಕಿ ವ್ಯಾಪಾರಿಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಲ್ಲೇಶ್ವರದ ಪಟಾಕಿ ವ್ಯಾಪಾರಿ ಚಂದ್ರಶೇಖರ್ ಎಂಬುವವರು ತಮ್ಮ ಅಳಲನ್ನು ತೋಡಿಕೊಂಡಿದ್ದು, ಕೋವಿಡ್ ಕಾರಣದಿಂದ ಜನತೆ ಸಂಕಷ್ಟದಲ್ಲಿದ್ದಾರೆ. ಮೊದಲು ಸಾವಿರಾರು ರೂಪಾಯಿಗಳ ವ್ಯಾಪಾರ ಮಾಡುತ್ತಿದ್ದ ಜನರು, ಈಗ ಬಾರಿ 200 ರಿಂದ 300 ರೂ. ವ್ಯಾಪಾರ ಮಾಡುತ್ತಿದ್ದು, ವ್ಯಾಪಾರದಲ್ಲಿ ಶೇ 50 ಕ್ಕಿಂತಲೂ ಹೆಚ್ಚು ಇಳಿಕೆಯಾಗಿದೆ ಎಂದು ಹೇಳಿದರು.
ಶೆಡ್ ಹಾಕಬೇಕಾದ್ರು ಭಾರಿ ಮಳೆ ಬಂದು ತೊಂದರೆಯಾಯಿತು. ಈಗ ಜನ ಕೋವಿಡ್ ಮತ್ತು ಮಳೆಯ ಕಾರಣದಿಂದ ಇತ್ತ ಕಡೆ ಸುಳಿಯುತ್ತಿಲ್ಲ. ಬರಿ ಸುರ್ ಸುರ್ ಬತ್ತಿ, ಫ್ಲವರ್ ಪಾಟ್, ಭೂ ಚಕ್ರ ಕೊಳ್ಳುತ್ತಿದ್ದು, ಪೊಲೀಸರ ಭಯವೂ ಇದ್ದು, ಕೇವಲ 3 ರಿಂದ 4 ತರಹದ ಪಟಾಕಿಗಳನ್ನು ಮಾತ್ರ ಕೊಳ್ಳುತ್ತಿದ್ದಾರೆ. ಪಟಾಕಿ ಬಾಕ್ಸ್ಗಳನ್ನು ಕೇಳುತ್ತಿಲ್ಲವಾದ್ದರಿಂದ ಎಲ್ಲಾ ಹಾಗೇ ಉಳಿದಿವೆ ಎಂದರು.
ಮುಂದಿನ ವರ್ಷದಿಂದ ವ್ಯಾಪಾರ ಮಾಡಬೇಕೋ ಬೇಡವೋ ಎಂಬ ಜಿಜ್ಞಾಸೆಯಲ್ಲಿದ್ದೇವೆ. ಈ ಬಾರಿ ಪೊಲೀಸ್ ಆಯುಕ್ತರು ಸಾಕಷ್ಟು ಲೈಸೆನ್ಸ್ ನೀಡುವ ವ್ಯವಸ್ಥೆಯಲ್ಲಿ ಸುಧಾರಣೆ ತಂದಿದ್ದು, ಸಂತಸದ ವಿಷಯ ಎಂದು ಹೇಳಿದರು.
ಕೆಲವು ವರ್ಷಗಳ ಹಿಂದೆ 120 ಅಂಗಡಿಗಳಿರುತ್ತಿದ್ದವು. ಹಿಂದಿನ ವರ್ಷ 20 ಅಂಗಡಿಗಳಿದ್ದವು, ಆದರೆ ಈ ಬಾರಿ ಬರಿ 6 ಅಂಗಡಿಗಳು ಇವೆ. ಅದರಲ್ಲೂ ಕೂಡ ಒಂದು ಬಾರಿ ಹೆಚ್ಚೆಂದರೆ 2-3 ಜನರು ಅಷ್ಟೇ ಕಾಣುತ್ತಿದ್ದು, ಒಬ್ಬೊಬ್ಬರು 200 ರಿಂದ 300 ರೂ. ಅಷ್ಟೇ ವ್ಯಾಪಾರ ಮಾಡುತ್ತಿದ್ದಾರೆ.
ಮಳೆ ಬಂದರೆ ವ್ಯಾಪಾರ ಸಂಪೂರ್ಣ ನೆಲ ಕಚ್ಚಲಿದ್ದು, ಹಲವು ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಕಳೆದ ವರ್ಷ ಸುಮಾರು 10 ಲಕ್ಷ ರೂ. ವ್ಯಾಪಾರ ಆಗಿತ್ತು, ಆದರೆ ಈ ಬಾರಿ ಇಲ್ಲಿಯವರೆಗೂ ಸುಮಾರು 1.5 ಲಕ್ಷ ಆಗಿದೆ. ಖರ್ಚುಗಳು ಹೆಚ್ಚಿದ್ದು, ಒಬ್ಬ ಹುಡುಗನಿಗೆ 1000 ರೂ ದಿನಕ್ಕೆ ಕೊಡಬೇಕಿದೆ. ವ್ಯಾಪಾರಕ್ಕಾಗಿ 10 ಜನ ಇದ್ದಾರೆ, ಅವರ ಊಟ ವಸತಿ ನೋಡಿಕೊಳ್ಳಬೇಕಿದೆ. ಕುಟುಂಬದ ಜನರೂ ಸೇರಿ 15 ಜನ ಈ ವ್ಯಾಪಾರದಲ್ಲಿ ತೊಡಗಿದ್ದೇವೆ. ಸರ್ಕಾರ ಮೊದಲೇ ಈ ಕ್ರಮವನ್ನು ತೆಗೆದುಕೊಂಡಿದ್ದರೆ ನಾವು ಇಷ್ಟು ಕಷ್ಟ ಅನುಭವಿಸುವ ಪರಿಸ್ಥಿತಿ ಬರುತ್ತಿರಲಿಲ್ಲ. ಸರ್ಕಾರ ಸ್ಪಷ್ಟವಾದ ಕ್ರಮವನ್ನು ಈ ನಿಟ್ಟಿನಲ್ಲಿ ಕೈಗೊಳ್ಳಬೇಕೆಂದು ವ್ಯಾಪಾರಿ ಚಂದ್ರಶೇಖರ್ ಮನವಿ ಮಾಡಿದರು.
2018 ರಿಂದಲೂ ಕಾರ್ಖಾನೆಗಳು ಹಸಿರು ಪಟಾಕಿಗಳನ್ನು ತಯಾರಿಸುತ್ತಿದ್ದು, ಈಗಿರುವ ಪಟಾಕಿಗಳು ಒಂದು ವರ್ಷದ ಹಿಂದೆಯೇ ತಯಾರಿಸಲಾಗಿದ್ದು, ಜನರು ತಯಾರಾದ ದಿನಾಂಕವನ್ನು ನೋಡಿ ಕೊಳ್ಳುತ್ತಿಲ್ಲ. ಕೋವಿಡ್ ಇರುವ ಕಾರಣ ಸುಮಾರು 6 ತಿಂಗಳು ಕಾರ್ಖಾನೆಗಳು ಮುಚ್ಚಿದ್ದು ಹೊಸದಾಗಿ ತಯಾರಿಸಿದ ಪಟಾಕಿ ಮಾರುಕಟ್ಟೆಗೆ ಬಂದಿಲ್ಲ ಎಂದು ಹೇಳುತ್ತಾರೆ.
ಕೇವಲ 5 ರಿಂದ 10 ಪ್ರತಿಶತ ದರಗಳು ಹೆಚ್ಚಾಗಿದ್ದು, ಅದು ಪ್ರತಿ ವರ್ಷವೂ ಆಗುತ್ತದೆ. ನಾವು ಪಟಾಕಿ ಮೊದಲೇ ಖರೀದಿಸಿ ಇಟ್ಟುಕೊಂಡಿದ್ದು, ಸರ್ಕಾರ ಒಂದೆರಡು ತಿಂಗಳು ಮುಂಚೆಯೇ ಹೇಳಿದ್ದರೆ ನಮಗೂ ಅನುಕೂಲವಾಗುತ್ತಿತ್ತು ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.