ಬೆಂಗಳೂರು: ಹವಾಮಾನ ಇಲಾಖೆಯಿಂದ ಬೆಂಗಳೂರು ನಗರಕ್ಕೆ ಇಂದು ಯೆಲ್ಲೋ ಅಲರ್ಟ್ ನೀಡಲಾಗಿದ್ದು, ನಗರದ ಹಲವೆಡೆ ದಟ್ಟ ಮೋಡ ಕವಿದ ವಾತಾವರಣ ಇದೆ. ಇನ್ನು ಕೆಲವೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ.
ಯಶವಂತಪುರ, ಜಯನಗರ, ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಾಳದಲ್ಲಿ ಧಾರಾಕಾರ ಮಳೆಯಾಗಿದೆ ಆದ್ರೆ ಯಾವುದೇ ಹಾನಿ ವರದಿಯಾಗಿಲ್ಲ ಎಂದು ಬಿಬಿಎಂಪಿ ಕಂಟ್ರೋಲ್ ರೂಂ ಸಿಬ್ಬಂದಿ ತಿಳಿಸಿದ್ದಾರೆ.
ಬೆಂಗಳೂರಲ್ಲದೇ, ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬೆಂ.ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಹಾಸನ, ಮಂಡ್ಯ, ಮೈಸೂರು, ಚಿಕ್ಕಮಗಳೂರು, ಕೋಲಾರ, ರಾಮನಗರ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಇಂದು ಕರಾವಳಿ ಜಿಲ್ಲೆಗಳಲ್ಲಿ ಹಲವು ಕಡೆ ಹಾಗೂ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವು ಕಡೆ ಮಾತ್ರ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ವಿಭಾಗದ ನಿರ್ದೇಶಕರಾದ ಸಿ.ಎಸ್ ಪಾಟೀಲ್ ತಿಳಿಸಿದರು. ಅಲ್ಲದೇ ಉತ್ತರ ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಸೆ. 29,30 ರಂದು ಹಗುರದಿಂದ ಸಾಧಾರಣ ಮಳೆಯಾಗಿದೆ ಎಂದರು.
ದಕ್ಷಿಣ ಒಳನಾಡಿನಲ್ಲಿ ಇಂದು ಬಹುತೇಕ ಎಲ್ಲ ಕಡೆ ಮಳೆಯಾಗಲಿದೆ. ನಾಳೆಯಿಂದ ಅ. 3 ರವರೆಗೆ ಕೆಲವು ಕಡೆ ಮಾತ್ರ ಮಳೆಯಾಗಲಿದೆ, ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಮಳೆಯಾಗುವ ಹೆಚ್ಚಿನ ಸಾಧ್ಯತೆ ಇರುವುದಾಗಿ ತಿಳಿಸಿದ್ದಾರೆ.