ಬೆಂಗಳೂರು : 2019 ರಲ್ಲಿ ರಾಜ್ಯ ಮಹಾ ಮಳೆಯ ರೌದ್ರವತಾರ ಕಂಡು ಬೆಚ್ಚಿಬಿದ್ದಿತ್ತು. ಅದರ ಭೀಕರತೆ ಮಾಸುವ ಮುನ್ನವೆ 2020 ರಲ್ಲೂ ಭಾರೀ ಮಳೆಗೆ ರಾಜ್ಯ ಸಾಕ್ಷಿಯಾಯಿತು. ಕೊರೊನಾ ಅಟ್ಟಹಾಸದ ಮಧ್ಯೆ ರಾಜ್ಯ ವರುಣನ ಅಬ್ಬರಕ್ಕೆ ತತ್ತರಿಸಿ ಹೋಗಿತ್ತು.
ಅತಿವೃಷ್ಟಿಯ ಭೀಕರತೆ ಹೇಗಿತ್ತು? : 2020 ರಲ್ಲಿ ಮೂರು ಬಾರಿ ಆರ್ಭಟಿಸಿದ ಮಳೆಗೆ ಹಲವು ಜಿಲ್ಲೆಗಳು ಅಕ್ಷರಶಃ ನಲುಗಿ ಹೋಗಿದ್ದವು. ಆಗಸ್ಟ್ 1ರಿಂದ 9ರ ವರೆಗೆ ಸುರಿದ ಭಾರೀ ಮಳೆಗೆ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಅಪಾರ ಪ್ರಮಾಣದ ಬೆಳೆ ಹಾನಿ, ಜೀವ ಹಾನಿ ಹಾಗೂ ಮೂಲಭೂತ ಸೌಕರ್ಯಗಳು ಹಾನಿಗೊಳಗಾಗಿದ್ದವು. ಹೀಗಾಗಿ, 17 ಜಿಲ್ಲೆಗಳ 80 ತಾಲೂಕುಗಳನ್ನು ಪ್ರವಾಹ ಪೀಡಿತ ತಾಲೂಕುಗಳೆಂದು ಸರ್ಕಾರ ಘೋಷಿಸಿದೆ. ಆಗಸ್ಟ್‌ನಲ್ಲಿ ರಾಜ್ಯ ಶೇ. 37 ಹೆಚ್ಚುವರಿ ಮಳೆಯನ್ನು ಕಂಡಿದೆ.
ಸೆಪ್ಟೆಂಬರ್‌ನಲ್ಲಿ ಕರಾವಳಿ ಕರ್ನಾಟಕ ಮಳೆಯ ಆರ್ಭಟಕ್ಕೆ ಸಾಕ್ಷಿಯಾಯಿತು. ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಸೇರಿದಂತೆ ಹಾವೇರಿ, ಕಲಬುರಗಿಯಲ್ಲಿ ಮಳೆಯಿಂದ ನೆರೆ ಪರಿಸ್ಥಿತಿ ಉಂಟಾಯಿತು. ಹವಾಮಾನ ಇಲಾಖೆ ಪ್ರಕಾರ 2020 ರ ಮುಂಗಾರು ಹಂಗಾಮಿನಲ್ಲಿ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಶೇ. 36 ರಷ್ಟು ಹೆಚ್ಚುವರಿ ಮಳೆಯಾಗಿದೆ. ಇದು ಕಳೆದ 59 ವರ್ಷಗಳಲ್ಲೇ ಅತ್ಯಧಿಕ ಮಳೆಯ ಪ್ರಮಾಣವಾಗಿದೆ. ಅದೇ ರೀತಿ ರಾಜ್ಯದಲ್ಲಿ ಮುಂಗಾರು ಹಂಗಾಮಿನ ಒಟ್ಟು 122 ದಿನಗಳಲ್ಲಿ ಪೈಕಿ ಪ್ರಸ್ತುತ ವರ್ಷದಲ್ಲಿ 50 ದಿನ ಮಳೆ ದಿನವಾಗಿದ್ದು, ಇದು ಕಳೆದ 60 ವರ್ಷಗಳಲ್ಲಿ ಅತ್ಯಧಿಕವಾಗಿದೆ. ಉತ್ತರ ಒಳನಾಡು ವಲಯದಲ್ಲಿ ಪ್ರಸ್ತುತ ವರ್ಷದಲ್ಲಿ ಒಟ್ಟು 46 ದಿನ ಮಳೆ ದಿನವಾಗಿದ್ದು, ಇದು ಕಳೆದ 60 ವರ್ಷಗಳಲ್ಲೇ ಅಧಿಕವಾಗಿದೆ. ದಕ್ಷಿಣ ಒಳನಾಡು ವಲಯದಲ್ಲಿ ಪ್ರಸ್ತುತ ವರ್ಷದಲ್ಲಿ ಒಟ್ಟು 36 ದಿನ ಮಳೆ ದಿನವಾಗಿದ್ದು, ಇದು ಕಳೆದ 60 ವರ್ಷಗಳಲ್ಲೇ 3ನೇ ಅತ್ಯಧಿಕ ಮಳೆ ದಿನಗಳಾಗಿವೆ.
ಅಕ್ಟೋಬರ್ ತಿಂಗಳಲ್ಲಿ 1 ರಿಂದ 15ನೇ ತಾರೀಕುವರೆಗೆ ಮೂರನೇ ಬಾರಿ ವರುಣ ಅಬ್ಬರಿಸಿ ಪ್ರವಾಹ ಸೃಷ್ಟಿಸಿತ್ತು. ಅಕ್ಟೋಬರ್ ತಿಂಗಳ ಈ ಅವಧಿಯಲ್ಲಿ ವಾಡಿಕೆಗಿಂತ ಸುಮಾರು ಶೇ. 38 ಹೆಚ್ಚುವರಿ ಮಳೆಯಾಗಿದೆ. ಅಕ್ಟೋಬರ್ 10 ರಿಂದ 15 ನಡುವೆ ಶೇ. 245 ರಷ್ಟು ಹೆಚ್ಚುವರಿ ಮಳೆಯಾಗಿದೆ.
ಮಳೆಯ ಅಬ್ಬರಕ್ಕೆ 37,805 ಕಿ.ಮೀ. ಹೆದ್ದಾರಿ, ರಸ್ತೆಗಳು ಹಾನಿಯಾಗಿದ್ದು, 4,549.85 ಕೋಟಿ ರೂ. ನಷ್ಟವಾಗಿದೆ. ಇನ್ನು 4,084 ಸೇತುವೆಗಳು ಹಾನಿಯಾಗಿದ್ದು, 760.87 ಕೋಟಿ ರೂ. ನಷ್ಟ ಸಂಭವಿಸಿದೆ. ಅತಿವೃಷ್ಟಿಯ ಹೊಡೆತಕ್ಕೆ 1,371 ಸಣ್ಣ ನೀರಾವರಿ ಸ್ಟೀಮ್‌ಗಳು ಹಾನಿಗೀಡಾಗಿದ್ದು, 478.37 ಕೋಟಿ ರೂ. ನಷ್ಟವಾಗಿದೆ. ಅದೇ ರೀತಿ 650 ಕೆರೆಗಳಿಗೆ ಹಾನಿಯಾಗಿ 58.51 ಕೋಟಿ ರೂ. ನಷ್ಟವಾಗಿದೆ.
7,606 ಸರ್ಕಾರಿ ಕಟ್ಟಡಗಳು ಹಾನಿಗೀಡಾಗಿದ್ದು, 226.68 ಕೋಟಿ ರೂ. ನಷ್ಟವಾಗಿದೆ. 291 ನೀರು ಸರಬರಾಜು ಹಾಗೂ ನೈರ್ಮಲ್ಯ ಕಾಲುವೆಗಳು ಕೊಚ್ಚಿಹೋಗಿ 17.33 ಕೋಟಿ ನಷ್ಟವಾಗಿದ್ದರೆ, 456 ಕುಡಿಯುವ ನೀರಿನ ಘಟಕಗಳು ಕೊಚ್ಚಿ ಹೋಗಿ ಸುಮಾರು 18.33 ಕೋಟಿ ನಷ್ಟ ಸಂಭವಿಸಿದೆ..
ಅತಿವೃಷ್ಟಿಗಾಗಿ ಕೇಂದ್ರದಿಂದ ಕೇಳಿದ ನೆರವು ಏನು? : ಆ. 1 ರಿಂದ ಸೆ.15 ರವರೆಗೆ ಮೊದಲ ಹಂತದ ಅತಿವೃಷ್ಟಿಗೆ ರಾಜ್ಯ ಸಾಕ್ಷಿಯಾಯಿತು. ಒಟ್ಟು 23 ಜಿಲ್ಲೆಗಳ 130 ತಾಲೂಕುಗಳನ್ನು ಪ್ರವಾಹ ಪೀಡಿತ ತಾಲೂಕುಗಳೆಂದು ಸರ್ಕಾರ ಘೋಷಿಸಿತ್ತು.
ಪ್ರವಾಹದಿಂದ ಒಟ್ಟು ಅಂದಾಜು 9,440.85 ಕೋಟಿ ರೂ ನಷ್ಟವಾಗಿದ್ದು, ಎನ್ಡಿಆರ್ಎಫ್ ಮಾರ್ಗಸೂಚಿಯನ್ವಯ 755.69 ಕೋಟಿ ರೂ. ಆರ್ಥಿಕ ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ಮೆಮೊರೆಂಡಮ್ ಸಲ್ಲಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರ ನವೆಂಬರ್ ತಿಂಗಳಲ್ಲಿ 577.84 ಕೋಟಿ ಪರಿಹಾರ ಬಿಡುಗಡೆ ಮಾಡಿದೆ.
ಸೆ.15 ರಿಂದ ಅ.3 ನೇ ವಾರದವರೆಗೆ ಎರಡನೇ ಮತ್ತು ಮೂರನೇ ಹಂತದ ಅತಿವೃಷ್ಟಿ ಉಂಟಾಗಿತ್ತು. ಈ ವೇಳೆ ರಾಜ್ಯದ 16 ಜಿಲ್ಲೆಗಳ 43 ತಾಲೂಕುಗಳನ್ನು ಹಾಗೂ ನಂತರ 67 ತಾಲೂಕುಗಳನ್ನು ಪ್ರವಾಹ ಪೀಡಿತವೆಂದು ಘೋಷಿಸಲಾಯಿತು.
ರಾಜ್ಯದ 25 ಜಿಲ್ಲೆಗಳ ಒಟ್ಟು 180 ತಾಲೂಕುಗಳನ್ನು ಪ್ರವಾಹ ಪೀಡಿತವೆಂದು ಘೋಷಿಸಲಾಗಿದೆ. ಈ ಅವಧಿಯಲ್ಲಿ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಹಾಗೂ ಮಹಾರಾಷ್ಟದ ಜಲಾಶಯಗಳಿಂದ ಭೀಮಾ ನದಿಗೆ ಬಿಟ್ಟ ಅಪಾರ ಪ್ರಮಾಣದ ನೀರಿನಿಂದಾಗಿ ಭೀಮಾ ನದಿ ಪಾತ್ರದ ಜಿಲ್ಲೆಗಳಾದ ವಿಜಯಪುರ, ಕಲಬುರಗಿ, ಯಾದಗಿರಿ, ರಾಯಚೂರು ಹಾಗೂ ಬೀದರ್ನಲ್ಲಿ ಅಪಾರ ಹಾನಿ ಉಂಟಾಯಿತು. ಇದರಿಂದ ಅಂದಾಜು 15,410.54 ಕೋಟಿ ರೂ. ನಷ್ಟವಾಗಿತ್ತು. ಎನ್ಡಿಆರ್ಎಫ್ ಮಾರ್ಗಸೂಚಿಯನ್ವಯ 1,629.24 ಕೋಟಿ ರೂ. ಆರ್ಥಿಕ ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ಮೆಮೊರೆಂಡಮ್ ಸಲ್ಲಿಸಲಾಗಿದೆ.