ಬೆಂಗಳೂರು: ನಿನ್ನೆ ಸುರಿದ ಮಳೆಗೆ ಸಾಕಷ್ಟು ಮರ, ವಿದ್ಯುತ್ ಕಂಬಗಳು ಮುರಿದುಬಿದ್ದಿದ್ದು, ಲಾಕ್ಡೌನ್ ಇದ್ದಿದ್ದರಿಂದ ಜನ ಬಚಾವಾಗಿದ್ದಾರೆ. ಆದರೆ ಮುಂದಿನ ಮೂರು ದಿನ ಸಾಕಷ್ಟು ಮಳೆಯಾಗಲಿದ್ದು, ಜನತೆ ಎಚ್ಚರ ವಹಿಸುವಂತೆ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.
ನಿನ್ನೆ ಸುರಿದ ಬಿರುಗಾಳಿ ಮಳೆಯ ರೀತಿಯಲ್ಲೇ ಮುಂದಿನ ಮೂರು ದಿನವೂ ಮಳೆಯಾಗಲಿದೆ. ಇಂದು ನಗರದಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆ ಇದ್ದು, ನಾಳೆಯಿಂದ ಬಿರುಗಾಳಿ, ಗುಡುಗು ಸಹಿತ ಸಂಜೆ ವೇಳೆಗೆ ಮಳೆಯಾಗಲಿದೆ. ನಗರದಲ್ಲಿ ಇಂದು ಮಳೆ ಬ್ರೇಕ್ ನೀಡುವ ಸಾಧ್ಯತೆ ಇದ್ದು, ನಾಳೆಯಿಂದ ಸತತವಾಗಿ ಮೂರು ದಿನ ಮಳೆ ಬರಲಿದೆ. ಸಂಜೆ ಹೊತ್ತು ಮಳೆ ಬರಲಿದ್ದು, ಕಚೇರಿಗೆ ಓಡಾಡುವವರು ಎಚ್ಚರಿಕೆಯಿಂದ ಓಡಾಡಬೇಕು. ಗೊತ್ತಿರುವ ರಸ್ತೆಯಲ್ಲೇ ಓಡಾಡಿದರೆ ಒಳ್ಳೆಯದು. ಚರಂಡಿ, ರಸ್ತೆ ಗುಂಡಿ ತುಂಬಲಿದ್ದು, ಮರ ಬೀಳುವ ಸಾಧ್ಯತೆ ಕೂಡ ಹೆಚ್ಚಿದೆ. ಹೀಗಾಗಿ ಜನ ಎಚ್ಚರಿಕೆಯಿಂದ ಇರಬೇಕೆಂದು ಡಾ. ಶ್ರೀನಿವಾಸ ರೆಡ್ಡಿ ಮುನ್ಸೂಚನೆ ನೀಡಿದ್ದಾರೆ.
ಭಾನುವಾರ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಅನೇಕ ಜಿಲ್ಲೆಗಳಲ್ಲಿ ಮಳೆಯಾಗಿದೆ. ನಿನ್ನೆ ಸಾರಕ್ಕಿ ವಿಭಾಗದಲ್ಲಿ 50 ಮಿಲಿ ಮೀಟರ್ ಮಳೆ ಪ್ರಮಾಣ ದಾಖಲಾಗಿದೆ. ಉಳಿದೆಡೆ 4, 5 ಮಿಲಿ ಮೀಟರ್ ಮಳೆಯಾಗಿದೆ. ಒಟ್ಟಾರೆ ನಗರದಲ್ಲಿ ನಿನ್ನೆ ಸುರಿದಿರುವ ಸರಾಸರಿ ಮಳೆ 12.5 ಮಿಲಿ ಮೀಟರ್. ಆದರೆ ಬಿರುಗಾಳಿ ಗಂಟೆಗೆ 45 ಕಿ.ಮೀ. ವೇಗದಲ್ಲಿ ಬೀಸಿದ್ದರಿಂದ ಸಾಕಷ್ಟು ಕಡೆ ಮರ, ವಿದ್ಯುತ್ ಕಂಬಗಳು ಧರೆಗುರುಳಿವೆ. ಇದು ಮುಂಗಾರು ಪೂರ್ವದಲ್ಲಿ ಸಾಮಾನ್ಯವಾಗಿದ್ದು, ಅರ್ಧ ಗಂಟೆಯ ಮಳೆಯಾದ್ರೂ ಬಿರುಗಾಳಿ ಗುಡುಗು ಹೆಚ್ಚಿರುತ್ತದೆ ಎಂದು ಹೇಳಿದರು.
ಅರಬ್ಬೀ ಸಮುದ್ರ ಮತ್ತು ಬಂಗಾಳ ಕೊಲ್ಲಿ ಎರಡೂ ಕಡೆಯಲ್ಲಿ ಮೇಲ್ಮೈ ಸುಳಿಗಾಳಿ ಇರುವುದರಿಂದ ದಕ್ಷಿಣ ಒಳನಾಡು, ಕರಾವಳಿ, ಮಲೆನಾಡು ಭಾಗಗಳಲ್ಲಿ ಹೆಚ್ಚಿನ ಮಳೆಯಾಗಲಿದೆ. ಉತ್ತರ ಒಳನಾಡಿಗೆ ಹೋಲಿಸಿದರೆ ದಕ್ಷಿಣ ಒಳನಾಡು, ಕರಾವಳಿಯಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದರು.