ಬೆಂಗಳೂರು: ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಬಾಕಿ ಇರುವ ರೈಲು ಯೋಜನೆಗಳನ್ನು ಶೀಘ್ರವಾಗಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸಹಾಯಕ ಸಚಿವ ಸುರೇಶ್ ಅಂಗಡಿ ತಿಳಿಸಿದರು.
ಸಹಾಯಕ ಸಚಿವ ಸುರೇಶ್ ಬಿ. ಅಂಗಡಿ ಇಂದು ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ, ರಾಜ್ಯದ ವಿವಿಧ ರೈಲ್ವೆ ಯೋಜನೆಗಳ ಕುರಿತು ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಅವರು, ಶಿವಮೊಗ್ಗದಿಂದ ಚೆನ್ನೈ ಹಾಗೂ ತಿರುಪತಿಗೆ ರೈಲ್ವೇ ಸಂಪರ್ಕ, ಬಾಗಲಕೋಟೆ - ಕುಡುಚಿ ರೈಲ್ವೆ ಬ್ರಾಡ್ ಗೇಜ್ ಬಗ್ಗೆ ಚರ್ಚಿಸಲಾಗಿದೆ. ಬೆಂಗಳೂರಲ್ಲಿ 17 ರೈಲ್ವೆ ಓವರ್ ಬ್ರಿಡ್ಜ್, ರೈಲ್ವೆ ಅಂಡರ್ ಬ್ರಿಡ್ಜ್ ಯೋಜನೆಗಳು ವೇಗವಾಗಿ ಕಾಮಗಾರಿ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಲ್ಯಾಂಡ್ ಸಮಸ್ಯೆಯಿಂದ ಅಂಡರ್ ಪಾಸ್, ಓವರ್ ಬ್ರಿಡ್ಜ್ ಕಾಮಗಾರಿಗಳು ವಿಳಂಬವಾಗುತ್ತಿದೆ. ಬಿಬಿಎಂಪಿ, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಸಹಕಾರದೊಂದಿಗೆ ಈ ಯೋಜನೆಗಳನ್ನು ಪೂರ್ಣಗೊಳಿಸಲು ನಿರ್ಧರಿಸಿದ್ದೇವೆ. ಸಬ್ ಅರ್ಬನ್ ರೈಲ್ವೆ ಬಗ್ಗೆ ಚರ್ಚಿಸಿದ್ದೇವೆ. ಮತ್ತೊಮ್ಮೆ ಸಭೆ ನಡೆಸಿ ಚರ್ಚಿಸುವ ಅಗತ್ಯವಿದೆ ಎಂದು ಹೇಳಿದರು.
ಸಭೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯಭಾಸ್ಕರ್, ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್, ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಮತ್ತು ರೈಲ್ವೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಚರ್ಚೆಯಾದ ಅಂಶಗಳು:
- ಶಿವಮೊಗ್ಗ ಔಟರ್ ರಿಂಗ್ ರಸ್ತೆ ಸಮೀಪ ರಸ್ತೆ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಜಾಗ ನೀಡಲು ಒಪ್ಪಿಗೆ
- ಶಿವಮೊಗ್ಗ - ಶಿಕಾರಿಪುರ - ರಾಣೆ ಬೆನ್ನೂರು ಹೊಸ ರೈಲ್ವೆ ಮಾರ್ಗದ ಆರಂಭಿಕ ಕೆಲಸಕ್ಕೆ ಒಪ್ಪಿಗೆ
- ಶಿವಮೊಗ್ಗ - ಯಶವಂತಪುರ ಇಂಟರ್ ಸಿಟಿ ರೈಲು ಸಂಚಾರ ಚೆನ್ನೈವರೆಗೆ ವಿಸ್ತರಣೆಗೆ ತಾತ್ವಿಕ ಒಪ್ಪಿಗೆ
- ಶಿವಮೊಗ್ಗ - ತಿರುಪತಿ ರೈಲು ಬೀರೂರು, ಚಿತ್ರದುರ್ಗ, ಬಳ್ಳಾರಿ ಮಾರ್ಗದಲ್ಲಿ ಸಂಚರಿಸಲು ತಾತ್ವಿಕ ಒಪ್ಪಿಗೆ
- ಶಿವಮೊಗ್ಗ ಮತ್ರು ಯಶವಂತಪುರ ನಡುವೆ ಸಂಚಾರ ಮಾಡುವ ಶತಾಬ್ದಿ ರೈಲಿನ ಸಮಯ ಬದಲಾವಣೆ ಕುರಿತು ಚರ್ಚೆ
- ಬೀರೂರು - ಶಿವಮೊಗ್ಗ ರೈಲು ಮಾರ್ಗದ ಡಬ್ಲಿಂಗ್ ಕಾಮಗಾರಿ ಸದ್ಯದಲ್ಲೇ ಆರಂಭಿಸಲು ಸೂಚನೆ
- ಮೆಟ್ರೋ ಕಾಮಗಾರಿಗಳಿಗೆ ರೈಲ್ವೇ ಇಲಾಖೆಯು ಸಹಕರಿಸುವಂತೆ ಮನವಿ