ಬೆಂಗಳೂರು: ರಾಹುಲ್ ಗಾಂಧಿಗೆ ಹೊಸ ಇಮೇಜ್ ನೀಡುತ್ತಿರುವ ಭಾರತ್ ಜೋಡೊ ಯಾತ್ರೆಗೆ ಮೈತ್ರಿ ಪಕ್ಷಗಳ ಸಹಕಾರ ಸಿಕ್ಕಿರುವುದು ಆನೆ ಬಲ ತಂದಿದೆ. ಸದ್ಯ ಯಾತ್ರೆ ತಮಿಳುನಾಡು, ಕೇರಳ, ಕರ್ನಾಟಕ ಮುಗಿಸಿ ಪ್ರಸ್ತುತ ತೆಲಂಗಾಣ ರಾಜ್ಯದಲ್ಲಿ ಕೂಡಾ ಸಾಗಿದೆ.
ಈಗಾಗಲೇ ತಮಿಳುನಾಡಿನಲ್ಲಿ ಮೈತ್ರಿ ಪಕ್ಷವಾದ ಡಿಎಂಕೆ ಸಹಯೋಗ ಸಿಕ್ಕು ಯಾತ್ರೆ ಫಲ ಕಂಡಿದೆ. ನವೆಂಬರ್ ಮೊದಲ ವಾರದಲ್ಲಿ ಯಾತ್ರೆ ಮಹಾರಾಷ್ಟ್ರ ರಾಜ್ಯ ಪ್ರವೇಶ ಮಾಡಲಿದೆ. ನಾಂದೇಡ್ ಜಿಲ್ಲೆ ಮೂಲಕ ಪ್ರವೇಶ ಪಡೆಯುವ ಯಾತ್ರೆಗೆ ಅಲ್ಲಿನ ಮೈತ್ರಿ ಪಕ್ಷಗಳಾದ ಶಿವಸೇನೆ ಹಾಗೂ ಎನ್ಸಿಪಿ ಬೆಂಬಲ ಸಿಕ್ಕಿದೆ.
ಎಐಸಿಸಿ ಮಹಾರಾಷ್ಟ್ರ ರಾಜ್ಯ ಉಸ್ತುವಾರಿ ಎಚ್.ಕೆ. ಪಾಟೀಲ್ ಹಾಗೂ ಇತರ ನಾಯಕರು ಮಾಜಿ ಸಿಎಂ ಉದ್ಧವ್ ಠಾಕ್ರೆ ಹಾಗೂ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾಗಿ ಯಾತ್ರೆಗೆ ಬೆಂಬಲ ಕೋರಿದ್ದು, ಇದಕ್ಕೆ ಉಭಯ ನಾಯಕರಿಂದಲೂ ಬೆಂಬಲ ವ್ಯಕ್ತವಾಗಿದೆ. ಇಷ್ಟು ಮಾತ್ರವಲ್ಲದೇ ಅವರು ಸಹ ಯಾತ್ರೆಯಲ್ಲಿ ಹೆಜ್ಜೆ ಹಾಕುವ ಭರವಸೆ ನೀಡಿದ್ದಾರೆ. ಅಲ್ಲಿಗೆ ಕಾಂಗ್ರೆಸ್ ಪಾದಯಾತ್ರೆ ತಮ್ಮ ಸರ್ಕಾರ ಇಲ್ಲದ ರಾಜ್ಯದಲ್ಲಿಯೂ ಯಶಸ್ಸು ಸಾಧಿಸುವ ಸೂಚನೆ ಪಡೆದಿದೆ.
ಈಗಾಗಲೇ ದಕ್ಷಿಣ ಭಾರತದ ತಮಿಳುನಾಡು, ಕೇರಳದಲ್ಲಿ ಉತ್ತಮ ಹಾಗೂ ಕರ್ನಾಟಕದಲ್ಲಿ ಅತ್ಯುತ್ತಮ ಜನಸ್ಪಂದನೆ ಪಡೆದಿರುವ ಯಾತ್ರೆ, ತೆಲಂಗಾಣದಲ್ಲಿ ಮುನ್ನಡೆದಿದೆ. ಅಲ್ಲಿಯೂ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದೆ ಎಂಬ ಮಾತಿದೆ. ರಾಹುಲ್ ಗಾಂಧಿಗೆ ಒಂದು ವಿಶೇಷ ಇಮೇಜ್ ನೀಡಿರುವ ಯಾತ್ರೆ ಮುಂದಿನ ದಿನಗಳಲ್ಲಿ ಮೈತ್ರಿಪಕ್ಷಗಳ ಸಹಕಾರದೊಂದಿಗೆ ಇನ್ನಷ್ಟು ಜನಪ್ರಿಯತೆ ಸಾಧಿಸಲಿದೆ ಎನ್ನುವುದು ಕಾಂಗ್ರೆಸ್ ನಾಯಕರ ಆಶಯ.
ತಮಿಳುನಾಡು ಉಸ್ತುವಾರಿ ದಿನೇಶ್ ಗುಂಡೂರಾವ್ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ಅಸಮಾಧಾನಗೊಂಡಿದ್ದಾರೆ. ಆದರೆ, ಅದು ಯಾತ್ರೆಯಲ್ಲಿ ಕಂಡುಬಂದಿಲ್ಲ. ಯಶಸ್ಸಿಗೂ ತೊಡಕಾಗಿಲ್ಲ. ಇನ್ನು ಮಹಾರಾಷ್ಟ್ರ ರಾಜ್ಯ ಉಸ್ತುವಾರಿ ಎಚ್.ಕೆ. ಪಾಟೀಲ್ ಸಹ ಯಾತ್ರೆ ಯಶಸ್ಸಿಗೆ ಪ್ರಯತ್ನ ಮುಂದುವರಿಸಿದ್ದಾರೆ.
ಕರ್ನಾಟಕದಲ್ಲಿ ಯಾತ್ರೆಗೆ ಅಭೂತಪೂರ್ವ ಯಶಸ್ಸು ದೊರಕಿದೆ. ರಾಜ್ಯ ಕಾಂಗ್ರೆಸ್ ನಾಯಕರು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಜನ ಭಾರಿ ಸಂಖ್ಯೆಯಲ್ಲಿ ಆಗಮಿಸಿ ಸ್ಪಂದಿಸಿದ್ದಾರೆ. ರಾಜ್ಯದಲ್ಲಿ ಯಾತ್ರೆ ಸಾಗಿದ ಸಂದರ್ಭ ಚಿತ್ರರಂಗದ ಪ್ರತಿನಿಧಿಗಳ ಪಾಲ್ಗೊಳ್ಳುವಿಕೆ ನಿರೀಕ್ಷಿಸಲಾಗಿತ್ತು. ಆದರೆ, ಯಾತ್ರೆಯ ಕಡೆಯ ದಿನ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಆಗಮಿಸಿದ್ದನ್ನು ಬಿಟ್ಟರೆ ಬೇರೆ ಯಾರೂ ಬೆಂಬಲ ನೀಡಿಲ್ಲ. ಮಂಡ್ಯ ಸಂಸದೆ ಡಾ. ಸುಮಲತಾ ಅಂಬರೀಶ್ ಪಾದಯಾತ್ರೆಯಲ್ಲಿ ಪಾಲ್ಗೊಂಡು ಬೆಂಬಲ ಸೂಚಿಸುವ ಮೂಲಕ ಮುಂದಿನ ಚುನಾವಣೆ ಕಾಂಗ್ರೆಸ್ ಪಕ್ಷದಿಂದ ಎದುರಿಸುತ್ತೇನೆ ಎಂಬ ಸಂದೇಶ ನೀಡಲಿದ್ದಾರೆ ಎನ್ನಲಾಗಿತ್ತು. ಆದರೆ ಅವರು ಬರಲೇ ಇಲ್ಲ.
ಮಾಜಿ ಸಚಿವೆಯರಾದ ಡಾ. ಜಯಮಾಲಾ, ಉಮಾಶ್ರಿ ಮುಂತಾದವರ ನಿರೀಕ್ಷೆ ಮಾಡಲಾಗಿತ್ತು. ಆದರೆ, ಅವರಿಗೂ ಬರಲು ಸಾಧ್ಯವಾಗಿಲ್ಲ. ಚಿತ್ರರಂಗದ ದಿಗ್ಗಜ ನಟ - ನಟಿಯರನ್ನು ರಾಜ್ಯ ರಾಜಕಾರಣಿಗಳು ಕರೆತರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅದು ಹುಸಿಯಾಗಿತ್ತು. ಆದಾಗ್ಯೂ ಯಾತ್ರೆಗೆ ರಾಜ್ಯದಲ್ಲಿ ಜನರ ಕೊರತೆ ಕಾಡಲೇ ಇಲ್ಲ. ರಾಹುಲ್ ಗಾಂಧಿ ನೇತೃತ್ವದ ಪಾದಯಾತ್ರೆ ಯಶಸ್ವಿಯಾಗಿ ಮುಂದುವರಿದಿದೆ.
ಪಾದಯಾತ್ರೆ ದೇಶದ ಜನರ ಮನಸ್ಸು ಗೆಲ್ಲುತ್ತೆ ಡಿಕೆಶಿ ವಿಶ್ವಾಸ: ರಾಹುಲ್ ಗಾಂಧಿ ನೇತೃತ್ವದ ಪಾದಯಾತ್ರೆ ಕೇವಲ ದಕ್ಷಿಣ ಭಾರತದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಗೆಲ್ಲಲಿದೆ. ಪ್ರತಿ ರಾಜ್ಯದ ಜನರ ಮನ ಗೆಲ್ಲಲಿದೆ. ಆರಂಭದಿಂದ ಕೊನೆಯವರೆಗೂ ಅಭೂತಪೂರ್ವ ಜನ ಬೆಂಬಲ ಸಿಗಲಿದೆ. ಕನ್ಯಾಕುಮಾರಿಯಿಂದ ಕಾಶ್ಮೀರ ವರೆಗೆ ಮಧ್ಯ ಭಾರತದಲ್ಲಿ ಸಾಗುವ ಯಾತ್ರೆ ಜನಮನ ಸೂರೆಗೊಳ್ಳುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ.. ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ ಮೋಹಕ ತಾರೆ ರಮ್ಯಾ