ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಕೈ ನಾಯಕರಲ್ಲಿ ಹೊಸ ಚೈತನ್ಯ ಮೂಡಿಸಿದೆ. ಎರಡು ದಿನಗಳ ಭೇಟಿ ಪ್ರಯುಕ್ತ ಇಂದು ಆಗಮಿಸುತ್ತಿರುವ ಎಐಸಿಸಿ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡಲಿದ್ದು, ಚುನಾವಣಾ ಗೆಲುವಿಗೆ ತಂತ್ರಗಾರಿಕೆ ರೂಪಿಸಲಿದ್ದಾರೆ.
ಈಗಾಗಲೇ ಒಂದೆರಡು ವಾರಗಳಿಂದ ರಾಜ್ಯ ಕಾಂಗ್ರೆಸ್ ನಾಯಕರು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. 100ಕ್ಕೂ ಹೆಚ್ಚು ಅಭ್ಯರ್ಥಿಗಳು ಬಿ ಫಾರಂ ಸ್ವೀಕರಿಸಿದ್ದು, ನಾಮಪತ್ರ ಸಲ್ಲಿಕೆ ಸಹ ಆರಂಭವಾಗಿದೆ. ಮೇ 10 ರಂದು ನಡೆಯುವ ಮತದಾನದ ಬಗ್ಗೆ ರಾಹುಲ್ ಗಾಂಧಿ ಇಂದು ಕಾಂಗ್ರೆಸ್ ಪಕ್ಷದ ಪ್ರಚಾರ ರಣಕಹಳೆ ಮೊಳಗಿಸಲಿದ್ದಾರೆ.
ಕಾಂಗ್ರೆಸ್ ನಾಯಕರ ಜತೆ ಸಮಾಲೋಚನೆ: ಕೋಲಾರ ಹಾಗೂ ಬೀದರ್ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವ ರಾಹುಲ್ ಗಾಂಧಿ ಬಯಲು ಸೀಮೆ ಹಾಗೂ ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಚುನಾವಣೆಗೆ ಹೊಸ ಉತ್ಸಾಹ ತುಂಬಲಿದ್ದಾರೆ. ಎರಡು ದಿನದ ಪ್ರವಾಸದಲ್ಲಿ ಅವರು ವಿವಿಧ ರಾಜ್ಯ ಕಾಂಗ್ರೆಸ್ ನಾಯಕರ ಜತೆ ಸಮಾಲೋಚಿಸಲಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕೈಗೊಳ್ಳಬಹುದಾದ ಕಾರ್ಯತಂತ್ರಗಳ ಕುರಿತು ಚರ್ಚಿಸಲಿದ್ದಾರೆ.
ಚುನಾವಣಾ ಪ್ರಚಾರ ಸಂದರ್ಭ ಯಾವ ರೀತಿಯ ನಡೆಯನ್ನ ಹೊಂದಬೇಕು ಮತ್ತು ಯಾರಿಗೂ ಅವಹೇಳನ ಮಾಡದ ರೀತಿ ಕಾಂಗ್ರೆಸ್ನ ಜನಪ್ರಿಯತೆಯನ್ನು ಮಾತ್ರ ಪ್ರಚಾರ ಮಾಡುವ ಕಾರ್ಯ ಮಾಡಬೇಕು ಎಂಬ ಸಂದೇಶವನ್ನು ರವಾನೆ ಮಾಡಲಿದ್ದಾರೆ. ಈ ಹಿಂದೆಯೂ ಬಿಜೆಪಿ ವರಿಷ್ಠರು ಅಥವಾ ನಾಯಕರ ವಿರುದ್ಧ ನೀಡಿದ ಹೇಳಿಕೆಗಳು ಕಾಂಗ್ರೆಸ್ ಗೆಲುವಿಗೆ ವ್ಯತಿರಿಕ್ತವಾಗಿ ಪರಿಣಮಿಸಿದ್ದು, ಈ ಬಾರಿ ಅಂತಹ ಘಟನೆ ಮರುಕಳಿಸದಿರುವಂತೆ ರಾಹುಲ್ ಗಾಂಧಿ ರಾಜ್ಯ ನಾಯಕರಿಗೆ ಸೂಚಿಸಲಿದ್ದಾರೆ. ಇಂದು ಸಂಜೆ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯ ಕೂಡಲಿರುವ ಅವರು ರಾಜ್ಯ ಕಾಂಗ್ರೆಸ್ ನಾಯಕರನ್ನು ಅಲ್ಲಿಗೆ ಕರೆಸಿಕೊಂಡು ಸಮಾಲೋಚಿಸಲಿದ್ದಾರೆ.
ಪ್ರವಾಸದ ವಿವರ: ಇಂದು ಬೆಳಗ್ಗೆ 9.30ಕ್ಕೆ ದೆದಲಿಯಿಂದ ಪ್ರಯಾಣ ಬೆಳೆಸುವ ರಾಹುಲ್ ಗಾಂಧಿ ಬೆಳಗ್ಗೆ 11-50ಕ್ಕೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ತಲುಪಲಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರು ಅವರನ್ನ ಬರಮಾಡಿಕೊಳ್ಳಲಿದ್ದು ಅಲ್ಲಿಂದ ನೇರವಾಗಿ ಕೋಲಾರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಮಧ್ಯಾಹ್ನ 12.25ಕ್ಕೆ ಕೋಲಾರಕ್ಕೆ ಆಗಮಿಸಿ, ಜಿಲ್ಲೆಯ ಹೊರವಲಯದ ಟಮಕ ಬಳಿ ನಡೆಯುವ ಜೈ ಭಾರತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
ತಮ್ಮ ಸಂಸತ್ ಸ್ಥಾನ ಅನರ್ಹಗೊಳ್ಳಲು ಕಾರಣವಾಗಿರುವ ಕೋಲಾರದ ಇದೇ ಸ್ಥಳದಿಂದ ರಾಜ್ಯ ಚುನಾವಣಾ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡುವರು ಹಾಗೂ ತಮ್ಮ ಅನರ್ಹತೆಗೆ ಕೇಂದ್ರ ಸರ್ಕಾರದ ವಿರುದ್ಧ ಹೋರಾಟಕ್ಕೆ ಚಾಲನೆ ನೀಡಲಿದ್ದಾರೆ. ಇಲ್ಲಿಂದಲೇ ತಮ್ಮ ಹೋರಾಟವನ್ನು ಆರಂಭಿಸಲು ತೀರ್ಮಾನಿಸಿದ್ದು, ಹೋರಾಟದ ಜೊತೆ ಜೊತೆಗೆ ಚುನಾವಣೆ ಸಂಬಂಧ ರಣಕಹಳೆ ಮೊಳಗಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಒಂದೂವರೆ ಲಕ್ಷ ಜನರನ್ನ ಸೇರಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ.
ಬಳಿಕ ಮಧ್ಯಾಹ್ನ 2.40ಕ್ಕೆ ಕೋಲಾರದಿಂದ ಬೆಂಗಳೂರಿಗೆ ಹೊರಡಲಿದ್ದಾರೆ. ಸಂಜೆ 5 ಗಂಟೆವರೆಗೆ ಶಾಂಗ್ರಿಲಾ ಹೋಟೆಲ್ನಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಸಂಜೆ 5.30ಕ್ಕೆ ಜೆ.ಪಿ ನಗರದಲ್ಲಿನ ಬೀದಿಬದಿ ವ್ಯಾಪಾರಿಗಳು, ಪೌರಕಾರ್ಮಿಕರ ಜತೆ ಸಂವಾದ ನಡೆಸಲಿದ್ದಾರೆ. ಸಂಜೆ 6.45ಕ್ಕೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಹಿಂಭಾಗದ ಇಂದಿರಾ ಗಾಂಧಿ ಭವನ ಉದ್ಘಾಟಿಸಲಿದ್ದಾರೆ.
ನಾಳೆ ಬೀದರ್ ಭೇಟಿ: ಏ.17ರಂದು ರಾಹುಲ್ ಗಾಂಧಿ ಬೀದರ್ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು, ಭಾಲ್ಕಿಯಲ್ಲಿ ನಡೆಯಲಿರುವ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ನಂತರ ಹುಮ್ನಾಬಾದ್ ಅಭ್ಯರ್ಥಿ ರಾಜಶೇಖರ್ ಪಾಟೀಲ್ ಪರವಾಗಿಯೂ ಸಾರ್ವಜನಿಕ ಸಮಾವೇಶದಲ್ಲಿ ಮತಯಾಚನೆ ಮಾಡಲಿದ್ದಾರೆ. ನಂತರ ಹೈದರಾಬಾದ್ ಮೂಲಕ ರಾಹುಲ್ ದೆಹಲಿಗೆ ವಾಪಸ್ ತೆರಳಲಿದ್ದಾರೆ.
ಕೊನೆಗೂ ಪ್ರವಾಸ ನಿಗದಿ: ಏ.5 ರಂದೇ ರಾಹುಲ್ ಗಾಂಧಿ ರಾಜ್ಯದ ಪ್ರವಾಸ ಕೈಗೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ಈ ದಿನಾಂಕ ಮೂರು ಸಾರಿ ಮುಂದೂಡಲ್ಪಟ್ಟಿದೆ. 5ರ ಬದಲು 9ಕ್ಕೆ ಆಗಮಿಸಲಿದ್ದಾರೆ ಎಂದು ಹೇಳಲಾಗಿತ್ತು. ಅದು ನಂತರ 10ಕ್ಕೆ ಮುಂದೂಡಲ್ಪಟ್ಟು ಅಂತಿಮವಾಗಿ ಪ್ರವಾಸ ಇಂದು (ಏ.16) ನಡೆಯುತ್ತಿದೆ.
ರಾಹುಲ್ ಗಾಂಧಿ ಎರಡು ದಿನಗಳ ಪ್ರವಾಸ ರಾಜ್ಯ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರಲ್ಲಿ ಉತ್ಸಾಹ ಮೂಡಿಸಿದೆ. ರಾಜ್ಯ ವಿಧಾನಸಭೆ ಚುನಾವಣೆ ಘೋಷಣೆ ಆದ ಬಳಿಕ ರಾಹುಲ್ ಗಾಂಧಿ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಈ ಮೂಲಕ ದೊಡ್ಡ ಮಟ್ಟದ ಪ್ರಚಾರ ಸಭೆಗೆ ಅವರು ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಸಿದ್ಧತೆ ನಡೆಸಲಾಗಿದೆ.
ಇದನ್ನೂ ಓದಿ: ರಾಜ್ಯಕ್ಕೆ ಇಂದು ರಾಹುಲ್ ಗಾಂಧಿ: ಕೋಲಾರ ಬೃಹತ್ ಸಮಾವೇಶದಲ್ಲಿ ಭಾಗಿ