ಬೆಂಗಳೂರು: ಭಾರತ್ ಮಾತಾ ಕಿ ಜೈ ಎನ್ನುವುದೇ ಅಪಾಯಕಾರಿ ರೋಗಿ ಎಂದವರನ್ನಿಟ್ಟುಕೊಂಡು ಭಾರತ್ ಜೋಡೋ ಯಾತ್ರೆ ಮಾಡುತ್ತಿರುವ ರಾಹುಲ್ ಗಾಂಧಿ ಒಕ್ಕೂಟ ವ್ಯವಸ್ಥೆ ರಚನೆ ವಿರುದ್ಧ ಹೇಳಿಕೆ ನೀಡಿ ಮತ್ತೊಮ್ಮೆ ದೇಶ ವಿಭಜನೆಯಂತಹ ಚಟುವಟಿಕೆಗೆ ಮುಂದಾಗಿದ್ದಾರೆ. ಆದರೆ, ಪ್ರತಿಯೊಬ್ಬ ಹಿಂದೂಸ್ತಾನಿ ಒಟ್ಟಾಗಿರುವವರೆಗೂ ಅದು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಗುಡುಗಿದರು.
ದೊಡ್ಡಬಳ್ಳಾಪುರದಲ್ಲಿ ಇಂದು ನಡೆದ ಬಿಜೆಪಿ ಸರ್ಕಾರದ ಮೂರು ವರ್ಷದ ಸಾಧನಾ ಸಮಾವೇಶ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ್ ಜೋಡೋ ಹೆಸರಿನಲ್ಲಿ ರಾಹುಲ್ ಗಾಂಧಿ ಇಂದು ಭಾರತವನ್ನು ಜೋಡಿಸುವ ಕೆಲಸ ಮಾಡುತ್ತಿರುವುದಾಗಿ ಹೇಳುತ್ತಿದ್ದಾರೆ. ಆದರೆ, ಗಾಂಧಿ ಕುಟುಂಬದ ರಾಜಕುಮಾರನಿಗೆ ಭಾರತವನ್ನು ಹಿಂದೆ ಬೇರ್ಪಡಿಸುವ ಕೆಲಸ ಯಾರು ಮಾಡಿದ್ದರು ಎಂದು ಪ್ರಶ್ನೆ ಮಾಡಬೇಕಿದೆ ಎಂದರು.
ಇದನ್ನೂ ಓದಿ: ಜನಸ್ಪಂದನ ಕಾರ್ಯಕ್ರಮದಲ್ಲಿ ಸಖತ್ ಸ್ಟೆಪ್ ಹಾಕಿದ ಎಂಟಿಬಿ, ವಿಶ್ವನಾಥ್
ಭಾರತ ಜೋಡೋ ಯಾತ್ರೆಯಲ್ಲಿ ಯಾರ ಜೊತೆ ಹೆಜ್ಜೆ ಹಾಕುತ್ತಿದ್ದೀರಿ?. ಭಾರತ ತುಕ್ಡೆ ತುಕ್ಡೆ ಹೋಂಗೆ ಅಂತ ಹೇಳಿದವರನ್ನು ಜೊತೆಗೆ ಕರೆದುಕೊಂಡು ಹೊಗುತ್ತಿದ್ದೀರಿ. ಇದು ರಾಷ್ಟ್ರದ್ರೋಹಕ್ಕೆ ಸಮನಾದ ಕೆಲಸ. ಭಾರತ್ ವಿಭಜಿಸುವ ಹೇಳಿಕೆ ಕೊಟ್ಟವರಿಗೆ ಬೆಂಬಲ ಕೊಡೋದು ರಾಷ್ಟ್ರದ್ರೋಹ. ಈ ರಾಷ್ಟ್ರದ್ರೋಹದ ಕೆಲಸವನ್ನು ಕರ್ನಾಟಕದ ಕಾಂಗ್ರೆಸ್ ಕಾರ್ಯಕರ್ತರು ಅವರ ನಾಯಕರಿಗೆ ಪ್ರಶ್ನಿಸಬೇಕಿದೆ ಎಂದು ಹೇಳಿದರು.
ಒಕ್ಕೂಟ ರಚನೆ ವ್ಯವಸ್ಥೆ ಬಗ್ಗೆಯೇ ರಾಹುಲ್ ಗಾಂಧಿ ಸಮರ ಸಾರುವ ಹೇಳಿಕೆ ನೀಡಿದ್ದಾರೆ. ಮತ್ತೊಮ್ಮೆ ದೇಶ ವಿಭಜನೆಗೆ ಮುಂದಾಗಿದ್ದಾರೆ. ರಾಹುಲ್ ಗಾಂಧಿಗೆ ರಾಷ್ಟ್ರದ ಹಿತಕ್ಕಿಂತ ಅಧಿಕಾರಕ್ಕೇರುವುದು ಮುಖ್ಯವಾಗಿದೆ. ಇದು ಅವರ ಅಧಿಕಾರದ ಹಪಾಹಪಿ ಎತ್ತಿ ತೋರಿಸಲಿದೆ. ಹಿಂದೂಸ್ತಾನಿಗಳು ಒಂದಾಗಿರುವ ತನಕ ಇಂತಹ ವಿಭಜನೆ ಕುತಂತ್ರಗಳು ಸಾಧ್ಯವಿಲ್ಲ,,ಅದಕ್ಕೆ ಅವಕಾಶವನ್ನೂ ಕೊಡುವುದಿಲ್ಲ. ಈ ದೇಶದಲ್ಲಿ ದೇಶಪ್ರೇಮಿಗಳು ಇರುವವರೆಗೂ ಈ ದೇಶ ಇಬ್ಭಾಗ ಆಗಲು ಬಿಡುವುದಿಲ್ಲ ಎಂದು ಗುಡುಗಿದರು.
ನಮಗೆ ಅಧಿಕಾರಕ್ಕಿಂತ ದೇಶವೇ ಮುಖ್ಯ: ಸ್ವಾತಂತ್ರ್ಯ ಬಂದ ನಂತರ ಸುದೀರ್ಘ ಕಾಲ ಆಳ್ವಿಕೆ ನಡೆಸಿದವರಿಗೆ ಈಗ ಅಧಿಕಾರ ಕೈತಪ್ಪಿದ್ದನ್ನು ಸಹಿಸಲಾಗುತ್ತಿಲ್ಲ. ಆದರೆ, ರಾಜ್ಯದಲ್ಲಿ ನಮ್ಮ ಹಿರಿಯ ನಾಯಕ ಯಡಿಯೂರಪ್ಪ ಸುದೀರ್ಘ ಕಾಲ ಅಧಿಕಾರ ಸಿಗದೇ ವಿರೋಧ ಪಕ್ಷದಲ್ಲೇ ಇದ್ದರೂ ಭಾರತ್ ಮಾತಾ ಕಿ ಜೈ ಅನ್ನೋದು ಬಿಡಲಿಲ್ಲ. ನಮ್ಮ ರಾಷ್ಟ್ರೀಯ ನಾಯಕರೂ ಭಾರತ ಮಾತೆ ವಿರುದ್ಧ ಮಾತನಾಡಲಿಲ್ಲ. ನಮಗೆ ಅಧಿಕಾರಕ್ಕಿಂತ ದೇಶವೇ ಮುಖ್ಯ ಎಂದು ಸ್ಮೃತಿ ಇರಾನಿ ತಿಳಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೇರಲು ಬಿಡಲ್ಲ, 150 + ಸ್ಥಾನದೊಂದಿಗೆ ಮತ್ತೆ ನಮ್ದೆ ಸರ್ಕಾರ: ಯಡಿಯೂರಪ್ಪ
ವಲ್ಲಬಭಾಯಿ ಪಟೇಲ್ ಪ್ರತಿಮೆಗೆ ಮಾಡಿದ್ದನ್ನು ಇಡೀ ವಿಶ್ವವೇ ಮೆಚ್ಚಿದೆ. ಆದರೆ, ಇವರಿಗೆ ಅದು ರುಚಿಸಲಿಲ್ಲ. ಸ್ವಾಮಿ ವಿವೇಕಾನಂದ ಅವರ ಪ್ರತಿಮೆಗೆ ಒಂದು ನಮನ ಸಲ್ಲಿಸಲಿಲ್ಲ. ಯಾಕೆಂದರೆ ಅವರು ಗಾಂಧಿ ಕುಟುಂಬದವರಲ್ಲ. ಪ್ರಧಾನಿ ರಾಜಪಥವನ್ನು ಕರ್ತವ್ಯಪಥ ಎಂದು ಘೋಷಿಸಿ, ಸುಭಾಶ್ಚಂದ್ರ ಬೋಸರ ಪ್ರತಿಮೆ ನಿರ್ಮಿಸಿದರು. ಅದಕ್ಕೆ ಗಾಂಧಿ ಕುಟುಂಬದಿಂದ ಒಂದು ಮಾತು ಬರಲಿಲ್ಲ. ಯಾಕೆಂದರೆ ಅವರು ಗಾಂಧಿ ಕುಟುಂಬದವರಲ್ಲ, ಇನ್ನು ಮೋದಿಯವರು ಗುಲಾಮಿತನ ಸಂಕೇತವನ್ನು ತೆಗೆದು ಶಿವಾಜಿಯವರ ಚಿಹ್ನೆಯನ್ನು ನೌಕಾಪಡೆ ಧ್ವಜದಲ್ಲಿ ಹಾಕಿದ್ದಾರೆ ಎಂದರು.
ಕಮಲ ಅರಳಿಸುವ ಸಂಕಲ್ಪ ಮಾಡಬೇಕು: ಈ ಪುಣ್ಯ ಭೂಮಿಯಲ್ಲಿ ಮತ್ತೆ ಕಮಲ ಅರಳಿಸುವ ಸಂಕಲ್ಪ ಮಾಡಬೇಕು. ಇದು ಸಂಗ್ರಾಮದ ವೇದಿಕೆ. ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಕರ್ನಾಟಕವನ್ನು ಏಕೆ ನಿರ್ಲಕ್ಷ್ಯ ಮಾಡಿದ್ದರು. ಮೋದಿ ಸರ್ಕಾರ ಬಂದ ಮೇಲೆ ದೇಶದಲ್ಲಿ ಯೋಜನಾ ಆಯೋಗದ ಮೂಲಕ 5,000 ಕೋಟಿ ನೀಡಲಾಗಿದೆ.
ಬಿಜೆಪಿ ಸರ್ಕಾರ ಬಂದ ಮೇಲೆ ಹೈವೇ ನಿರ್ಮಾಣ ಮಾಡಲು ಕರ್ನಾಟಕಕ್ಕೆ 9,000 ಕೋಟಿ ಹಣ ನೀಡಿದೆ. ಭಾರತ ಮಾಲಾ ಯೋಜನೆ ಅಡಿಯಲ್ಲಿ 55 ಸಾವಿರ ಕೋಟಿ ರೂ. ಯೋಜನೆ ಜಾರಿಗೆ ಬರಲಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ತಿಳಿಸಿದರು.
ಇದನ್ನೂ ಓದಿ: ತಾಕತ್ತಿದ್ದರೆ ನಮ್ಮ ಗೆಲುವು ತಡೆಯಿರಿ: ಜನಸ್ಪಂದನ ಕಾರ್ಯಕ್ರಮದಲ್ಲಿ ಕಾಂಗ್ರೆಸ್ಗೆ ಸಿಎಂ ಸವಾಲು
ಕಾಂಗ್ರೆಸ್ ಸರ್ಕಾರ ಇದ್ದಾಗ ರೈಲ್ವೆ ಎಲೆಕ್ಟ್ರಿಕ್ ಮಾಡಲು ಮೀನಮೇಷ ಎಣಿಸಿತು. ಆದರೆ, ಬಿಜೆಪಿ ಸರ್ಕಾರ ಬಂದಾಗ 1,600 ಕಿಮೀ ವಿದ್ಯುತ್ ಲೈನ್ ಮಾಡಲಾಯಿತು. ದೇಶದಲ್ಲಿ ಎನ್ಇಪಿ ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ. ಇದಕ್ಕೆ ಬೊಮ್ಮಾಯಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕರ್ನಾಟಕವನ್ನು ಸೆಮಿಕಂಡಕ್ಟರ್ ಹಬ್ ಮಾಡಲಾಗುವುದು. 15,000 ಕೋಟಿ ರೂ. ವೆಚ್ಚದ ಸಬ್ ಅರ್ಬನ್ ಯೋಜನೆ ಜಾರಿಗೆ ತರಲಾಗಿದೆ. ಫಾರ್ಮರ್ ಪ್ರೊಡೂಸರ್ ಕಂಪನಿಗಳಿಗೆ 30 ಲಕ್ಷ ಹಣ ನೀಡಿ ಕೃಷಿ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಕೆಲವೇ ದಿನಗಳಲ್ಲಿ ರೇಷ್ಮೆ ಉತ್ಪಾದನೆಯಲ್ಲಿ ಭಾರತ ಆತ್ಮನಿರ್ಭರ ಆಗಲಿದೆ ಎಂದು ಇರಾನಿ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸಚಿವರ ಸಾವಿನ ಸೂತಕವೇ ಕಳೆದಿಲ್ಲ..ಬಿಜೆಪಿಯದ್ದು ಜನಸ್ಪಂದನವಲ್ಲ, ಕಮಿಷನ್ ಸಮಾವೇಶ: ಕಾಂಗ್ರೆಸ್ ಟೀಕೆ
ಕೊರೊನಾ ಸಂದರ್ಭದಲ್ಲಿ ನಮ್ಮದೇ ಲಸಿಕೆ ಉತ್ಪಾದನೆ ಮಾಡಿ ಎಲ್ಲರಿಗೂ ನೀಡಲಾಗುವುದು ಎಂದು ಮೋದಿ ಘೋಷಿಸಿದ್ದರು. ಅದರಂತೆ ಎಲ್ಲರಿಗೂ ಲಸಿಕೆ ನೀಡಿದ್ದೇವೆ. ಸ್ವತಃ ಮೋದಿ ಲಸಿಕೆ ಪಡೆದು ಜನತೆಗೆ ಲಸಿಕೆ ಪಡೆಯಲು ಪ್ರೇರಣೆ ನೀಡಿದರೆ, ಕಾಂಗ್ರೆಸ್ ಲಸಿಕೆ ವಿರುದ್ಧ ಅಪಪ್ರಚಾರ ನಡೆಸಿತು. ಬುಡಕಟ್ಟು ಮಹಿಳೆಯೊಬ್ಬರನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ. ಆದರೆ ಗಾಂಧಿ ಕುಟುಂಬದ ಚಮಚಾಗಳು ಮಹಿಳಾ ರಾಷ್ಟ್ರ ಪತಿ ವಿರುದ್ಧ ಟೀಕೆ, ನಿಂದನೆ ಮಾಡಿದರು ಎಂದು ಟೀಕಿಸಿದರು.
ನೆಟ್ಟಾರು ಬೆನ್ನಿಗೆ ಚೂರಿ ಹಾಕಿದವರು ರಣ ಹೇಡಿಗಳು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಬೆನ್ನಿಗೆ ಚೂರಿ ಹಾಕಿದವರು ರಣ ಹೇಡಿಗಳು. ನೆಟ್ಟಾರು ಅವರನ್ನು ಸಾಯಿಸಿದವರ ಉದ್ದೇಶ ಆತಂಕ ಸೃಷ್ಟಿಸೋದೇ ಆಗಿದೆ ಎಂದು ಸಚಿವೆ ಇರಾನಿ ಆರೋಪಿಸಿದರು.
ಇದನ್ನೂ ಓದಿ: ಜನಸ್ಪಂದನ ಕಾರ್ಯಕ್ರಮ.. ಪ್ರವೀಣ್ ನೆಟ್ಟಾರು ಮನೆಯವರಿಗೆ ಉದ್ಯೋಗ: ಬೊಮ್ಮಾಯಿ ಘೋಷಣೆ