ಬೆಂಗಳೂರು : ಸಂಸದ ಡಿ.ಕೆ.ಸುರೇಶ್ ಅವರು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾದರೆ ಅವರಿಗಾಗಿ ಕ್ಷೇತ್ರ ತ್ಯಾಗ ಮಾಡಲು ಸಿದ್ಧ ಎಂದು ರಘುನಾಥ ನಾಯ್ಡು ತಿಳಿಸಿದ್ದಾರೆ. ಈಗಾಗಲೇ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಘೋಷಿತರಾಗಿರುವ ರಘುನಾಥ ನಾಯ್ಡು ಅವರು, ಒಂದೊಮ್ಮೆ ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ವಿರುದ್ಧ ಕಾಂಗ್ರೆಸ್ ಪಕ್ಷ ಕೂಡ ಡಿ.ಕೆ.ಸುರೇಶ್‌ರನ್ನು ಕಣಕ್ಕಿಳಿಸಲು ಮುಂದಾದರೆ ತಾವು ಕ್ಷೇತ್ರ ತ್ಯಾಗ ಮಾಡಲು ಸಿದ್ಧವಿರುವುದಾಗಿ ಹೇಳಿದರು.
ಡಿ.ಕೆ.ಸುರೇಶ್ ನಿಲ್ಲುತ್ತಾರೆ ಎಂದರೆ ನಾನೇ ಕ್ಷೇತ್ರ ಬಿಟ್ಟು ಕೊಡುತ್ತೇನೆ. ಅವರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ 70 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸುತ್ತೇವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮುಂದೆ ಹೇಗೆ ಚುನಾವಣೆಯನ್ನು ಗೆಲ್ಲಬಹುದು ಎಂದು ವಿವರ ಕೊಟ್ಟಿದ್ದೇನೆ ಎಂದು ರಘುನಾಥ ನಾಯ್ಡು ಹೇಳಿದರು.
ಇದನ್ನೂ ಓದಿ : ನಾಳೆ ಜೆಡಿಎಸ್ ಅಭ್ಯರ್ಥಿಗಳ 2ನೇ ಲಿಸ್ಟ್ ಬಿಡುಗಡೆ: ಹೆಚ್ ಡಿ ಕುಮಾರಸ್ವಾಮಿ
ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಇಬ್ಬರೂ ಕಾಂಗ್ರೆಸ್ ಪಕ್ಷದ ಆಸ್ತಿ. ಆರ್.ಅಶೋಕ್ ಅವರು ಎರಡೂ ಕ್ಷೇತ್ರಗಳಲ್ಲಿ ಸೋಲು ಕಾಣುವುದು ಖಂಡಿತ. ಕನಕಪುರದಲ್ಲಿ ಮೂರನೇ ಸ್ಥಾನಕ್ಕೆ ಆರ್ ಅಶೋಕ್ ಹೋಗುತ್ತಾರೆ. ಡಿ.ಕೆ.ಶಿವಕುಮಾರ್ ಒಂದೂವರೆ ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದರು.
ಕೆಪಿಸಿಸಿ ಅಧ್ಯಕ್ಷರಿಂದ ನಾಳೆ ಬಿ ಫಾರಂ ಪಡೆದ ಬಳಿಕ ಏ.19ಕ್ಕೆ ನಾಮಿನೇಷನ್ ಮಾಡುತ್ತೇನೆ. ನೀನೇ ನಿಲ್ಲು, ರಾಜ್ಯದಲ್ಲಿ ಇತಿಹಾಸ ಬರೆಯಬಹುದು ಎಂದು ನನಗೆ ಅಧ್ಯಕ್ಷರು ಹೇಳಿದ್ದಾರೆ. ಇಂದು ಸಮಯ ಸರಿಯಿರಲಿಲ್ಲ. ಹೀಗಾಗಿ ನಾಳೆ ಬಂದು ಬಿ ಫಾರಂ ತೆಗೆದುಕೊಳ್ಳುತ್ತೇನೆ. ಡಿ.ಕೆ.ಸುರೇಶ್ ಹೊರತುಪಡಿಸಿದರೆ ಪದ್ಮನಾಭನಗರದಲ್ಲಿ ನಾನೇ ಪವರ್ ಫುಲ್ ಎಂದು ರಘುನಾಥ ನಾಯ್ಡು ಹೇಳಿದರು.
ಇದನ್ನೂ ಓದಿ : ಕೆಪಿಸಿಸಿ ಕಚೇರಿಯಲ್ಲಿ ಬಿ ಫಾರಂ ವಿತರಣೆ: ನೊಣವಿನಕೆರೆ ಅಜ್ಜಯ್ಯನಿಗೆ ವಂದಿಸಿ ಕಾರ್ಯ ಆರಂಭಿಸಿದ ಡಿಕೆಶಿ
ಬಿ ಫಾರಂ ವಿತರಸಿದ ಡಿಕೆಶಿ: ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅಭ್ಯರ್ಥಿಗಳಿಗೆ ಬಿ ಫಾರಂ ವಿತರಣೆ ಪ್ರಾರಂಭಿಸಿದರು. ಬಿ ಫಾರಂ ನೀಡುವ ಸಂದರ್ಭದಲ್ಲಿ ನೊಣವಿನಕೆರೆ ಅಜ್ಜಯ್ಯ ಫೋಟೋಗೆ ನಮಿಸಿ ಬಿ ಫಾರಂ ಹಿಡಿದುಕೊಂಡೆ ಡಿಕೆಶಿ ಪ್ರಾರ್ಥನೆ ಮಾಡಿದರು. ಬಳಿಕ ಭೈರತಿ ಸುರೇಶ್ಗೆ ಮೊದಲ ಬಿ ಫಾರಂ ನೀಡಿದ್ದು, ನಂತರ ಉಳಿದ ಅಭ್ಯರ್ಥಿಗಳಿಗೆ ವಿತರಿಸಿದರು.
ಇದನ್ನೂ ಓದಿ : 'ಒಂದು ಕಡೆ ನಿಂತು ಗೆಲ್ಲುವುದೇ ಕಷ್ಟ, ನೀನೇಕೆ ಎರಡು ಕಡೆ ನಿಂತೆ?' ಸೋಮಣ್ಣಗೆ ಶ್ರೀನಿವಾಸ್ ಪ್ರಸಾದ್ ಪ್ರಶ್ನೆ!