ಬೆಂಗಳೂರು: ಡಿಸೆಂಬರ್ 5 ವಿಶ್ವ ಮಣ್ಣಿನ ದಿನ. ಹೀಗಾಗಿ, ಈ ದಿನವನ್ನು ವಿಶೇಷವಾಗಿ ಆಚರಿಸಲು ಶ್ರೀರಾಮಚಂದ್ರಾಪುರ ಮಠ ಮುಂದಾಗಿದೆ.
ಗಿರಿನಗರದ ಶ್ರೀರಾಮಚಂದ್ರಾಪುರ ಮಠ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಘವೇಶ್ವರ ಭಾರತೀ ಸ್ವಾಮೀಜಿ, ಡಿಸೆಂಬರ್ 5ರಂದು ವಿಶ್ವ ಮಣ್ಣು ದಿನವಾದ್ದರಿಂದ ಮಣ್ಣು ಸಂರಕ್ಷಣೆಯಿಂದ ಮನುಕುಲದ ಸಂರಕ್ಷಣೆ ವಿಷಯದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಬಳಿಯ ಗೋಸ್ವರ್ಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಶಿರಸಿ ಹಾಗೂ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ರಾಮಚಂದ್ರಾಪುರ ಮಠ ಯಾಕೆ ಇಂತಹ ಕಾರ್ಯಕ್ರಮ ಮಾಡಲಿದೆ ಎಂಬ ಪ್ರಶ್ನೆಗೆ, ಮಣ್ಣು ಅಂದ್ರೆ ದೇವರು. ದೇವರನ್ನು ನೋಡಬೇಕು ಅಂದ್ರೆ ಮಣ್ಣನ್ನು ನೋಡಿದರಾಯ್ತು. ಮನುಷ್ಯ ಸತ್ತರೆ ಮಣ್ಣಿಗೆ ಹೋಗ್ತಾನೆ. ಮಣ್ಣು ಸತ್ತರೆ ಎಲ್ಲಿಗೆ ಹೋಗುವುದು. ಆದರೆ, ಮಣ್ಣನ್ನು ನಾವು ದೇವರಂತೆ ಕಾಣುತ್ತಿಲ್ಲ. ಯೂಸ್ ಅಂಡ್ ಥ್ರೋ ರೀತಿ ಬಳಸುತ್ತಿದ್ದೇವೆ. ಹೀಗಾಗಿ, ಜಗತ್ತಿನ ಮೊದಲ ಗೋಸ್ವರ್ಗದಲ್ಲಿ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದರು.
ಗೋಮೂತ್ರ ಮಣ್ಣಲ್ಲಿ ಮಿಶ್ರಣ ಆದಾಗ ಮಣ್ಣು ಶುದ್ಧಿಯಾಗುತ್ತದೆ. ಮಠ ಕೈಗೊಳ್ಳುತ್ತಿರುವ ಪರಿಸರ ಸ್ನೇಹಿ ಕಾರ್ಯಕ್ರಮದಲ್ಲಿ ಸಮಾಜದ ಸಹಯೋಗ ಬಯಸುತ್ತೇವೆ. ಮಣ್ಣಲ್ಲಿ ದೇವರನ್ನು ಕಾಣಲಿ, ಮಣ್ಣಿನ ಬೆಲೆ ಮನುಜರಿಗೆ ತಿಳಿಯಲಿ ಎಂಬುದು ಈ ಕಾರ್ಯಕ್ರಮದ ಉದ್ದೇಶ. ವರ್ಷದಲ್ಲಿ ನಾಲ್ಕು ವಿಚಾರಗಳ ಬಗ್ಗೆ ಸಂಕಿರಣ ನಡೆಸಲು ತೀರ್ಮಾನಿಸಿದ್ದು, ಇದು ಮೊದಲ ವಿಚಾರ ಸಂಕಿರಣ ಆಗಿದೆ. ಸಾವಿರಕ್ಕೂ ಹೆಚ್ಚು ಜನ ವಿಚಾರ ಸಂಕಿರಣದಲ್ಲಿ ಭಾಗಿಯಾಗುವ ಸಾಧ್ಯತೆಯಿದೆ ಎಂದರು.