ಬೆಂಗಳೂರು: ರ್ಯಾಗಿಂಗ್ಗೆ ಬೇಸತ್ತು ವಿದ್ಯಾರ್ಥಿಯೋರ್ವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಲಹಂಕ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗೌರಿಬಿದನೂರು ಮೂಲದ ಗಗನ್ (21) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಗಗನ್ ಪ್ರಥಮ ವರ್ಷದ ಬಿಎಸ್ಸಿ ಅಗ್ರಿಕಲ್ಚರ್ ವ್ಯಾಸಂಗ ಮಾಡುತ್ತಿದ್ದು, ಜಿಕೆವಿಕೆಯ ಹಾಸ್ಟೆಲ್ನಲ್ಲಿ ಉಳಿದುಕೊಂಡಿದ್ದನು. ಆದರೆ ಆ ಹಾಸ್ಟೆಲ್ನ ಹಿರಿಯ ವಿದ್ಯಾರ್ಥಿಗಳು ನಿರಂತವಾಗಿ ಗಗನ್ಗೆ ರಾಗಿಂಗ್ ಮಾಡುತ್ತಿದ್ದರಂತೆ. ಇದರಿಂದ ಬೇಸತ್ತ ಗಗನ್ ನಿನ್ನೆ ರಾತ್ರಿ ಜಿಕೆವಿಕೆ ಬಳಿ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಎಂ.ಎಸ್.ಆಸ್ಪತ್ರೆಗೆ ಕಳುಹಿಸಲಾಗಿದೆ.
ಗಗನ್ ಸಾವಿಗೆ ಪ್ರತಿಕ್ರಿಯಿಸಿರುವ ಆತನ ಮಾವ ಮಲ್ಲೇಶ್, ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಗಗನ್ಗೆ ರ್‍ಯಾಂಕ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಜಿಕೆವಿಕೆಯಲ್ಲಿ ಬಿಎಸ್ಸಿ ಕೋರ್ಸ್ಗೆ ಅರ್ಜಿ ಹಾಕಿದ್ದರಿಂದ ಉಚಿತವಾಗಿ ಸೀಟ್ ಸಿಕ್ಕಿತ್ತು. ಹೀಗಾಗಿ ಇದೇ ಹಾಸ್ಟಲ್ನಲ್ಲಿ ಓದುತ್ತಿದ್ದನು. ಆದರೆ ಹಿರಿಯ ವಿದ್ಯಾರ್ಥಿಗಳು ಗಗನ್ ಕೈಲಿ ಹೋಂ ವರ್ಕ್ ಮಾಡಿಸೋದು, ಅವರ ಕೆಲಸವನ್ನು ಇವನ ಕೈಯಲ್ಲಿ ಮಾಡಿಸೋದು ಮಾಡಿ ಟಾರ್ಚರ್ ನೀಡುತ್ತಿದ್ದರಂತೆ. ಈ ವಿಚಾರವನ್ನು ಮನೆಯವರ ಬಳಿ ಹೇಳಿಕೊಂಡಿದ್ದ ಎಂದು ದುಃಖ ವ್ಯಕ್ತಪಡಿಸಿದ್ದಾರೆ.